
ದೇವನಹಳ್ಳಿ: ನ್ಯಾಯಾಲಯ ವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ ಕಂದಾಯ ಅಧಿಕಾರಿಗಳು ಪ್ರವೇಶಿಸಬಾರದು ಎಂದು ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಆರ್. ಸೋಮಶೇಖರ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾಡಳಿತ ಆಯೋಜಿಸಿದ್ದ ‘ಭೂಮಿ@25’ ಜಿಲ್ಲಾ ಮಟ್ಟದ ಕಂದಾಯ ಇಲಾಖೆಯ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಮತ್ತು ಸಂಬಂಧಿತ ಕಾನೂನುಗಳ ಅರಿವು ಹೊಂದಿರಬೇಕು. ಜಮೀನು ಹಾಗೂ ಆಸ್ತಿ ವರ್ಗಾವಣೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಂದಾಯ ಸೇವೆಗಳನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಹೊಸ ಕಾನೂನು, ನಿಯಮ ಹಾಗೂ ತಾಂತ್ರಿಕ ಬದಲಾವಣೆ ಕುರಿತು ನಿರಂತರವಾಗಿ ತಿಳಿದುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ಕಂದಾಯ ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಇಂತಹ ತರಬೇತಿ ಕಾರ್ಯಗಾರಗಳು ಸಹಾಯಕವಾಗಿವೆ. ಸಿಬ್ಬಂದಿ ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ತಂತ್ರಾಂಶಗಳ ಬಳಕೆಯಿಂದ ಭೂಮಿಯ ಸರ್ವೆ ಕಾರ್ಯಗಳನ್ನು ವೇಗವಾಗಿ ಪೂರ್ಣಗೊಳಿಸಬಹುದು. ಆಸ್ತಿ ಮಾಲೀಕರು ನಿಧನರಾದ ಸಂದರ್ಭದಲ್ಲಿ ಸೂಕ್ತ ದಾಖಲೆಗಳೊಂದಿಗೆ ಸ್ಥಳ ಮಹಜರು ನಡೆಸಿ ವಾರಸುದಾರರಿಗೆ ಫವತಿ ಖಾತೆ ಮಾಡಬೇಕು. ಸರ್ಕಾರಿ ಆಸ್ತಿಗಳನ್ನು ಅಕ್ರಮದಿಂದ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ ಎಂದು ತಿಳಿಸಿದರು.
ಕಾರ್ಯಗಾರದಲ್ಲಿ ಭೂ ದಾಖಲೆಗಳ ನಿರ್ವಹಣೆ, ಭೂ ಪರಿವರ್ತನೆ, ಪೋಡಿ, ಫವತಿ ಖಾತೆ, ಕಂದಾಯ ವಸೂಲಿ ಹಾಗೂ ನಾಗರಿಕ ಸೇವೆಗಳ ದಕ್ಷತೆ ಹೆಚ್ಚಿಸುವ ಕುರಿತ ತರಬೇತಿ ನೀಡಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಆಯಿಶಾ ಸೈಯದ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.