
ದೇವನಹಳ್ಳಿ: ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿದ್ದ ಭೂ ಸ್ವಾಧೀನ ವಿರುದ್ಧ ಸುದೀರ್ಘ ಹೋರಾಟ ನಡೆಸಿದ ಜಯ ಸಾಧಿಸಿದ ಚನ್ನರಾಯಪಟ್ಟಣ ಭಾಗದ ರೈತರು ‘ಭೂಮಿ ಹಬ್ಬ’ ಆಚರಿಸಿದರು.
ಕಾಮ್ರೆಡ್ ಜೆ.ಸಿ. ಬಯ್ಯಾರೆಡ್ಡಿ ವೇದಿಕೆಯಲ್ಲಿ ಶುಕ್ರವಾರ ನಡೆದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ‘ಭೂಮಿ ಹಬ್ಬ’ ವಿಜಯೋತ್ಸವ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಹೋರಾಟ ದಿನಗಳನ್ನು ಮೆಲುಕು ಹಾಕಿ, ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸಲಾಯಿತು.
ತಾಲೂಕಿನ ಚನ್ನರಾಯಪಟ್ಟಣ ಹಾಗೂ ಸುತ್ತಮುತ್ತಲಿನ 13 ಹಳ್ಳಿಗಳ ರೈತರು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಮೂರು ವರ್ಷ ಅನಿರ್ಧಿಷ್ಟವಾಧಿ ಧರಣಿ ನಡೆಸಿದರು. ಹೋರಾಟಕ್ಕೆ ಮಣಿದ ಸರ್ಕಾರ ಫಲವತ್ತಾದ ಸುಮಾರು 1,777 ಎಕರೆ ಕೃಷಿಭೂಮಿ ಸ್ವಾಧೀನವನ್ನು ಕೈ ಬಿಟ್ಟಿತು. ಈ ಹಿನ್ನೆಲೆ ರೈತರು ಮತ್ತು ಹೋರಾಟಗಾರರು ‘ಭೂಮಿ ಹಬ್ಬ’ ಆಚರಿಸಿ ತಮ್ಮ ಏಕತೆ ಮತ್ತು ಹೋರಾಟದ ಶಕ್ತಿ ಪ್ರದರ್ಶಿಸಿದರು.
ಹೋರಾಟದ ನೆನಪುಗಳನ್ನು ಸ್ಮರಿಸಿದ ರೈತರು ಪರಸ್ಪರ ಅಭಿನಂದನೆ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಘೋಷಣೆಗಳು ಹಾಗೂ ಗೌರವ ಸಮರ್ಪಣೆಗಳ ಮೂಲಕ ಸಮಾರಂಭಕ್ಕೆ ವಿಶೇಷ ಮೆರಗು ನೀಡಲಾಯಿತು.
“ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಮಣ್ಣಿನ ಮೇಲೆ ಕಣ್ಣಿಟ್ಟಿದ್ದ ಭೂದಾಹದ ವ್ಯವಸ್ಥೆ ವಿರುದ್ಧ ರೈತರು ತೋರಿದ ಸಂಘಟಿತ ಶಕ್ತಿಗೆ ಸರ್ಕಾರ ಕೊನೆಗೂ ಮಣಿದಿದೆ. ಮಳೆ, ಬಿಸಿಲು, ಗಾಳಿ ಎನ್ನದೆ ಧರಣಿ ನಡೆಸಿದ ರೈತರ ದೃಢ ಸಂಕಲ್ಪಕ್ಕೆ ಸಂದ ಜಯ ಇದು. ಇದು ಕೇವಲ ಚನ್ನರಾಯಪಟ್ಟಣದ ಜಯವಲ್ಲ; ಭೂಮಿಯೇ ಜೀವನಾಧಾರವೆಂದು ನಂಬಿರುವ ಸಮಸ್ತ ರೈತ ಸಮುದಾಯದ ಸ್ವಾಭಿಮಾನಕ್ಕೆ ದೊರೆತ ಗೌರವ’ ಎಂದು ಸಮಿತಿಯ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಹೇಳಿದರು.
ಹೋರಾಟದ ಅವಧಿಯಲ್ಲಿ ವಿವಿಧ ಜನಪರ ಸಂಘಟನೆಗಳು, ಪ್ರಗತಿಪರ ಚಿಂತಕರು, ದಲಿತಪರ ಸಂಘಟನೆಗಳು ಮತ್ತು ಗ್ರಾಮಸ್ಥರು ನೀಡಿದ ಬೆಂಬಲ ಸ್ಮರಣೀಯವಾಗಿದೆ ಎಂದು ಮುಖಂಡ ನಂಜಪ್ಪ ಹೇಳಿದರು.
ನಿವೃತ್ತ ನ್ಯಾಯಮೂರ್ತಿಗಳು, ಸಾಹಿತಿಗಳು, ಕಲಾವಿದರು, ಪ್ರಗತಿಪರ ರೈತರು, ದಲಿತಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾವಿರಾರು ಗ್ರಾಮಸ್ಥರು ಭಾಗವಹಿಸಿದ್ದರು. ಸಮಾರಂಭವು ಘೋಷಣೆಗಳು, ಹಾಡುಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಸಡಗರದಿಂದ ನಡೆಯಿತು.
ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಮಾರೇಗೌಡ, ತಿಮ್ಮರಾಯಪ್ಪ, ರಾಮಚಂದ್ರಪ್ಪ, ಪ್ರಮೋದ್, ಗೋಪಿ, ಪ್ರಕಾಶ್, ಕೃಷ್ಣಪ್ಪ, ಲಕ್ಷ್ಮಮ್ಮ, ವೆಂಕಟರಮಣಪ್ಪ ಸೇರಿದಂತೆ ಅನೇಕ ರೈತ ಮುಖಂಡರು, ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.