
ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಪ್ರಸ್ತಾವಿತ ಏರೋಸ್ಪೇಸ್ ಪಾರ್ಕ್‌ಗಾಗಿ ಸ್ವಯಂಪ್ರೇರಿತವಾಗಿ ಭೂಮಿ ನೀಡಲು ಮೂರು ತಿಂಗಳ ಗಡುವು ನಿಗದಿ ಮಾಡಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಪ್ರಕಟಣೆ ಹೊರಡಿಸಿರುವುದಕ್ಕೆ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ವಿರೋಧಿ ಹೋರಾಟದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಹಿಂದೆ ಕೈಬಿಟ್ಟಿದ್ದರೂ, ಇದೀಗ ಸ್ವಯಂಪ್ರೇರಿತ ಭೂಮಿ ನೀಡುವ ಆಯ್ಕೆಯನ್ನು ಮುಂದಿಟ್ಟು ‘ಹಿಂಬಾಗಿಲಿನಿಂದ’ ಕೃಷಿ ಭೂಮಿ ಪಡೆಯಲು ಸರ್ಕಾರ ಮುಂದಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ಸಂಬಂಧ ಜನವರಿ 23ರಂದು ಕೆಐಎಡಿಬಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಏಪ್ರಿಲ್ 30ರೊಳಗೆ ಭೂಮಿ ನೀಡಲು ಸಮ್ಮತಿಸುವ ರೈತರು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಅರವಿಂದ ಭವನದ ಕೆಐಎಡಿಬಿ ಕಚೇರಿಗೆ ತಮ್ಮ ಒಪ್ಪಿಗೆ ಪತ್ರ ಸಲ್ಲಿಸುವಂತೆ ಸೂಚಿಸಿದೆ. ಸ್ವಯಂ ಇಚ್ಛೆಯಿಂದ ಭೂಮಿ ನೀಡುವವರಿಗೆ ಸಮಿತಿ ನಿರ್ಧರಿಸುವ ಪರಿಹಾರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕ್ರಮವನ್ನು ರೈತರು ತೀವ್ರವಾಗಿ ಖಂಡಿಸಿದ್ದು, ‘ಕೆಐಎಡಿಬಿ ಪ್ರಕಟಣೆಯನ್ನು ನಾವು ಒಪ್ಪುವುದಿಲ್ಲ. ಮುಂದಿನ ಹೋರಾಟದ ರೂಪುರೇಷೆಯನ್ನು ಶೀಘ್ರದಲ್ಲೇ ತೀರ್ಮಾನಿಸುತ್ತೇವೆ’ ಎಂದು ಭೂಸ್ವಾಧೀನ ವಿರೋಧಿ ಹೋರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷದ ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏರೋಸ್ಪೇಸ್ ಪಾರ್ಕ್‌ಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದರು. ಈ ಘೋಷಣೆಯನ್ನು ಡಿಸೆಂಬರ್ 6ರಂದು ಸರ್ಕಾರದ ಆದೇಶದ ಮೂಲಕ ಅಧಿಕೃತಗೊಳಿಸಲಾಗಿತ್ತು. ಜತೆಗೆ ಆ 1,777 ಎಕರೆ ಭೂಮಿಯನ್ನು ಶಾಶ್ವತ ವಿಶೇಷ ಕೃಷಿ ವಲಯ ಎಂದು ಘೋಷಿಸಿ, ಭೂಬಳಕೆ ಪರಿವರ್ತನೆಗೆ ನಿಷೇಧ ವಿಧಿಸಲಾಗಿತ್ತು. ಭೂಮಿಯನ್ನು ಕೃಷಿ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂಬ ಷರತ್ತನ್ನೂ ವಿಧಿಸಲಾಗಿತ್ತು.
ಈ ನಿರ್ಧಾರಕ್ಕೂ ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರದ ದ್ವಂದ್ವ ನೀತಿ ವಿರೋಧಿಸಿ, ರೈತಪರ ಹಾಗೂ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಚರ್ಚಿಸಿ, ಶಾಶ್ವತ ವಿಶೇಷ ಕೃಷಿ ವಲಯ ಘೋಷಣೆಯನ್ನು ಹಿಂತೆಗೆಸಬೇಕು ಹಾಗೂ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ರೈತರು ಒತ್ತಡ ತಂದಿದ್ದರು.
ಬಯಪ್ಪಾ ಹಾಗೂ ಎಸ್‌ಟಿಆರ್‌ಆರ್ ಸೇರಿದಂತೆ ಸ್ಥಳೀಯ ಯೋಜನಾ ಪ್ರಾಧಿಕಾರಗಳಿಗೆ ಈ ವಲಯ ಘೋಷಣೆಯನ್ನು ಮಾಸ್ಟರ್ ಪ್ಲಾನ್‌ಗಳಲ್ಲಿ ದಾಖಲಿಸುವಂತೆ ಸರ್ಕಾರ ಸೂಚಿಸಿದ್ದು, ಭೂ ದಾಖಲೆಗಳ ಪ್ರಮುಖ ಅಂಶವಾದ ಪಹಣಿ (ಆರ್‌ಟಿಸಿ) ಪತ್ರದಲ್ಲಿಯೂ ಈ ವಿವರವನ್ನು ನಮೂದಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.