ADVERTISEMENT

ದೇವನಹಳ್ಳಿ ಮಾಜಿ ಶಾಸಕರಿಂದ ಸಾವಿರಾರು ಎಕರೆ ಭೂ ಕಬಳಿಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 5:17 IST
Last Updated 15 ಫೆಬ್ರುವರಿ 2026, 5:17 IST
ವಿಜಯಪುರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಕ್ಕೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಹಾಗೂ ಹೋರಾಟಗಾರರು
ವಿಜಯಪುರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಕ್ಕೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಹಾಗೂ ಹೋರಾಟಗಾರರು   

ವಿಜಯಪುರ (ದೇವನಹಳ್ಳಿ): ದೇವನಹಳ್ಳಿಯ ಮಾಜಿ ಶಾಸಕರೊಬ್ಬರು 70ರ ದಶಕದ ತಮ್ಮ ಅಧಿಕಾರ ಅವಧಿಯಲ್ಲಿ ತಾಲ್ಲೂಕಿನ ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಸುತ್ತಮುತ್ತ ಸಾವಿರಾರು ಎಕರೆ ಭೂಮಿ ಕಬಳಿಸಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಭಾರತ್ ಮುಕ್ತಿ ಮೋರ್ಚಾ, ಬಹುಜನ ಕ್ರಾಂತಿ ಮೋರ್ಚಾ, ರಾಷ್ಟ್ರೀಯ ಕಿಸಾನ್ ಮೋರ್ಚಾ ಮುಖಂಡರು ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದರು. 

ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಎಕರೆ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲಾಗಿದೆ. ಒಂದೇ ಕುಟುಂಬದ ಹಲವರ ಹೆಸರಿನಲ್ಲಿ ನೂರಾರು ಎಕರೆ ಭೂಮಿ ಮಂಜೂರಾಗಿರುವಂತೆ ದೇವನಹಳ್ಳಿಯ ಮಾಜಿ ಶಾಸಕರೊಬ್ಬರು ನಕಲಿ ಭೂ ದಾಖಲೆ ಸೃಷ್ಟಿಸಿಕೊಂಡಿದ್ದಾರೆ ಎಂದು ಗ್ರಾಮದ ಮುನಿರಾಜು ಎಂಬುವರು ಆರೋಪ ಮಾಡಿದರು.    

ADVERTISEMENT

ಭೂಮಿಗಳನ್ನು ವಾಪಸ್ಸು ಕೊಡಿಸುವಂತೆ ಅಕ್ಲೇನಹಳ್ಳಿ-ಮಲ್ಲೇನಹಳ್ಳಿಯ ಪರಿಶಿಷ್ಟ ಜಾತಿ-ಪಂಗಡದ ಕುಟುಂಬಗಳು ನ್ಯಾಯಾಲಯದ ಮೊರೆ ಹೋಗಿದ್ದೇವು. ಭೂಮಿ ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ಮಾಡಿತ್ತು.  ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿ ಜಾಗ ಗುರುತಿಸಿದ್ದರು. ನಾಮಫಲಕ ಹಾಕಿದ್ದರು. ಜಿಲ್ಲಾಧಿಕಾರಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ಆದರೆ, ಏಕಾಏಕಿ ಜಿಲ್ಲಾಧಿಕಾರಿ ವರ್ಗಾವಣೆಯಾದರು. ತಾಲ್ಲೂಕು ಕಚೇರಿಯಲ್ಲಿ ಇದಕ್ಕೆ ಸಂಬಂಧಿಸಿದ ದಾಖಲೆ ಸಿಗುತ್ತಿಲ್ಲ ಎಂದು ದೂರಿದರು.

ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದ ನಂತರ ಬಡವರ ಭೂಮಿಗಳನ್ನು ಕಬಳಿಸುವ ಪ್ರವೃತ್ತಿ ಜಾಸ್ತಿಯಾಗಿದೆ. ಅಧಿಕಾರಿಗಳು ಇದಕ್ಕೆ ಬೆಂಬಲ ನೀಡಿ, ಎಲ್ಲಾ ದಾಖಲೆಗಳನ್ನು ಒದಗಿಸಿಕೊಡುತ್ತಿದ್ದಾರೆ ಎಂದು ವಕೀಲ ಸಿದ್ಧಾರ್ಥ ಆರೋಪಿಸಿದರು.

ರೈತರು ದಾಖಲೆ ಕೇಳಿದರೆ ಸಿಗಲ್ಲ. ಭೂ ಮಾಫಿಯಾದವರಿಗೆ ಅರ್ಧ ತಾಸಿನಲ್ಲಿ ದಾಖಲೆ ಲಭ್ಯವಾಗುತ್ತಿವೆ. ರಾಜ್ಯ ಸರ್ಕಾರವು ಭೂ ಕಬಳಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ 50 ಕ್ಕೂ ಹೆಚ್ಚು ಕುಟುಂಬಗಳಿಗೆ ಹಳೆಯ ಊರು, ಅವರು ಕಳೆದುಕೊಂಡಿರುವ ಆಸ್ತಿಗಳನ್ನು ಪುನಃ ಅವರಿಗೆ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಹೇಳಿದರು.

ಚಿಕ್ಕೇಗೌಡ, ನಾರಾಯಣಸ್ವಾಮಿ, ಮುನಿಶಾಮಪ್ಪ, ದೇವರಾಜ್, ಗೌರಮ್ಮ, ವಕೀಲ ಮೂರ್ತಿ, ಮುನಿರಾಜು, ಶಿವಪ್ಪ, ಮುನಿರಾಜು, ರವಿ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.