ಸಿದ್ದರಾಮಯ್ಯ
ದೇವನಹಳ್ಳಿ: ಒಳ ಮೀಸಲು ಜಾರಿಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿ ವರ್ಷ ಪೂರ್ಣಗೊಳ್ಳುತ್ತಿದ್ದು, ಆಗಸ್ಟ್ 15ರೊಳಗೆ ಮೀಸಲಾತಿ ಅನುಷ್ಠಾನ ಮಾಡಬೇಕು. ಇಲ್ಲದಿದ್ದರೆ ರಾಜ್ಯ ಬಂದ್ ಮಾಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾದಿಗ ದಂಡೋರ ಪ್ರಚಾರ ಸಮಿತಿ ಎಚ್ಚರಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಬುಳ್ಳಹಳ್ಳಿ ಎಂ ರಾಜಪ್ಪ ಮಾತನಾಡಿ, ಆಗಸ್ಟ್ 1 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗಸ್ಟ್ 15ರ ಗಡುವು ಕೊಡುತ್ತಿದ್ದೇವೆ. ಒಂದು ವೇಳೆ ರಾಜ್ಯ ಸರ್ಕಾರ, ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, 15 ರ ನಂತರ ರಾಜ್ಯ ಬಂದ್ ಮಾಡುವ ಮೂಲಕ ಹೋರಾಟವನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯುವುದು ಅನಿವಾರ್ಯವಾಗಲಿದೆ. ಮುಂದೆ ಆಗುವಂತಹ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದರು.
ಆಗಸ್ಟ್ 1 ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಕರ್ನಾಟಕ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಶಂಕರಪ್ಪ ಸೇರಿದಂತೆ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಾದಿಗ ಸಮುದಾಯದವರು ಭಾಗವಹಿಸಲಿದ್ದಾರೆ ಎಂದರು.
ಒಳ ಮೀಸಲಾತಿ ಜಾರಿಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದರೂ, ರಾಜ್ಯ ಸರ್ಕಾರ, ಪ್ರಭಾವಿತ ಸಮುದಾಯಗಳ ಕಪಿಮುಷ್ಠಿಯಲ್ಲಿ ಸಿಲುಕಿ, ವಿನಾಕಾರಣ, ಜಾತಿ ಸಮೀಕ್ಷೆಯ ಹೆಸರಿನಲ್ಲಿ ವರದಿ ಅನುಷ್ಠಾನ ಮಾಡದೆ ಮೀನಾಮೇಷ ಅನುಸರಿಸುತ್ತಿದೆ ಎಂದು ದೂರಿದರು.
ಸರ್ಕಾರವೇ ನಡೆಸುತ್ತಿರುವ ಸಮೀಕ್ಷೆಯ ವರದಿಯನ್ನು ತರಿಸಿಕೊಳ್ಳಲು ನೆಪ ಹೇಳುವುದು ಸರಿಯಲ್ಲ. 60 ದಿನಗಳಲ್ಲಿ ವರದಿ ತಯಾರಿಸಲು ಸಮಿತಿ ರಚಿಸಿದೆಯಾದರೂ, ಇದುವರೆಗೂ ವರದಿ ಸಮಿತಿಯ ಕೈ ಸೇರದಿರುವುದು ವಿಪರ್ಯಾಸ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಿಸಿದರು.
ಮುಖಂಡರಾದ ಮುದುಗುರ್ಕಿ ನರಸಿಂಹಮೂರ್ತಿ, ಮುನಿರಾಜು, ಪ್ರಕಾಶ್, ಕೇಶವ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.