ADVERTISEMENT

ದೇವನಹಳ್ಳಿ: ಭೂಸ್ವಾಧೀನ; ಮುಂದಿನ ಹೋರಾಟಕ್ಕೆ ರೈತರ ಸಿದ್ಧತೆ

ಚನ್ನರಾಯಪಟ್ಟಣ ಭೂಸ್ವಾಧೀನ ರದ್ದತಿಯ ಆದೇಶ ಪ್ರಕಟಿಸುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 3:14 IST
Last Updated 22 ಸೆಪ್ಟೆಂಬರ್ 2025, 3:14 IST
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ಕೇಂದ್ರ ಧರಣಿ ಸ್ಥಳದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡರು, ರೈತರು ಭಾನುವಾರ ಸಭೆ ನಡೆಸಿದರು
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ಕೇಂದ್ರ ಧರಣಿ ಸ್ಥಳದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡರು, ರೈತರು ಭಾನುವಾರ ಸಭೆ ನಡೆಸಿದರು   

ದೇವನಹಳ್ಳಿ: ರಾಜ್ಯ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಎರಡು ತಿಂಗಳು ಕಳೆದಿದೆ. ಆದಾಗ್ಯೂ, ಈವರೆಗೆ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲಾಗಿದೆ ಎಂಬ ಕುರಿತು ಸರ್ಕಾರ ಡಿನೋಟಿಫಿಕೇಷನ್ ಆದೇಶ ಹೊರಡಿಸದ ಕಾರಣ, ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ ಸಮಿತಿಯು ಭಾನುವಾರ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿತು. 

ಈ ಕುರಿತು ಸಭೆಯಲ್ಲಿ ಮಾತನಾಡಿದ ಕಾರಳ್ಳಿ ಶ್ರೀನಿವಾಸ್, ‘ಚನ್ನರಾಯಪಟ್ಟಣ ರೈತರು, ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಜುಲೈ 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಈ ಕುರಿತು ದೇಶದಾದ್ಯಂತ ಸುದ್ದಿಯಾಗಿತ್ತು. ಸರ್ಕಾರವು ರೈತರ ಪರ ನಿಲುವು ತೆಗೆದುಕೊಂಡಿದ್ದಾಗಿ ಪ್ರಚಾರವನ್ನೂ ಪಡೆದಿತ್ತು. ಆದರೆ, ಈ ಘೋಷಣೆ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಅಸಮಾಧಾನ ಹೊರಹಾಕಿದರು. 

ಮತ್ತೊಂದೆಡೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಎರಡು ಹಳ್ಳಿಗಳ 439 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಬೆಲೆ ನಿಗದಿಗೆ ಸಭೆ ಬರುವಂತೆ ಆ ಎರಡು ಹಳ್ಳಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ನೋಟಿಸ್ ನೀಡಲಾಗಿದ್ದು, ಗೊಂದಲಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು. 

ADVERTISEMENT

ರೈತರು ಹೋರಾಟ ತೀವ್ರಗೊಳಿಸುವ ಸೂಚನೆ ನೀಡಿದ ನಂತರ ಈ ಸಭೆಯನ್ನು ಮುಂದೂಡಲಾಗಿದೆ. ಮುಖ್ಯಮಂತ್ರಿ ಆದೇಶಕ್ಕೆ ಬೆಲೆ ನೀಡದವರನ್ನು ಹೇಗೆ ನಂಬುವುದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಚಂದ್ರತೇಜಸ್ವಿ ಮಾತನಾಡಿ, ‘ರೈತರು ತಮ್ಮ ಊರುಗಳಲ್ಲಿ ಮತ್ತೊಮ್ಮೆ ಸಂಘಟಿತರಾಗಿ, ಹೋರಾಟ ಚುರುಕುಗೊಳಿಸಬೇಕು. ಯಾವುದೇ ಸಂದರ್ಭದಲ್ಲಿ ಹೋರಾಟದ ಅನಿವಾರ್ಯತೆ ಎದುರಾಗಬಹುದು. ಎಲ್ಲರೂ ಸನ್ನದ್ಧರಾಗಿರಬೇಕು. ಈ ಬಾರಿ ಹಿಂದಿಗಿಂತಲೂ ಉಗ್ರ ಹೋರಾಟ ರೂಪುಗೊಳ್ಳಲಿದೆ’ ಎಂದು ಎಚ್ಚರಿಕೆ ನೀಡಿದರು. 

ರೈತರ ಜಮೀನುಗಳ ಪರಭಾರೆ ಪ್ರಕ್ರಿಯೆಯನ್ನು ಕೆಐಎಡಿಬಿ ಕೈಬಿಟ್ಟಿದೆ ಎಂಬ ಆದೇಶವನ್ನು ಸರ್ಕಾರ ಶೀಘ್ರವೇ ಹೊರಡಿಸಬೇಕು. ಇಲ್ಲವಾದಲ್ಲಿ, ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ರೈತರು ಸರ್ಕಾರಕ್ಕೆ ಎಚ್ಚರಿಸಿದರು. 

ಸಭೆಯಲ್ಲಿ ನೀರಾವರಿ ಹೋರಾಟಗಾರ ಮಳ್ಳೂರು ಹರೀಶ್, ನಲ್ಲಪ್ಪನಹಳ್ಳಿ ನಂಜಪ್ಪ, ಅಶ್ವಥಪ್ಪ, ಶ್ರೀನಿವಾಸ್, ಸುಬ್ರಹ್ಮಣಿ, ನಂದೀಶ್, ನಂದನ್, ಗೋಪಿನಾಥ್, ಮುನಿವೆಂಕಟಮ್ಮ, ಲಕ್ಷ್ಮಮ್ಮ, ಮೋಹನ್, ವೆಂಕಟೇಶ್, ಪಿಳ್ಳಣ್ಣ, ಮರಿಯಣ್ಣ, ಲಕ್ಷ್ಮಣ್ಣ ಸೇರಿದಂತೆ ಹಲವು ಗ್ರಾಮಗಳ ರೈತರು ಭಾಗವಹಿಸಿದ್ದರು.

Cut-off box - ‘ದಸರಾ ಬಳಿಕ ಮುಂದಿನ ನಿರ್ಧಾರ’ ಎರಡು ಹಳ್ಳಿಗಳ ರೈತರ ಭೂಸ್ವಾಧೀನದ ಕುರಿತು ಬೆಲೆ ನಿಗದಿ ಸಭೆಗೆ ಹಾಜರಾಗುವಂತೆ ಸೂಚಿಸಿ ಕೆಐಎಡಿಬಿ ನೋಟಿಸ್ ಜಾರಿ ಮಾಡಿರುವ ಕುರಿತು ಸಂಯುಕ್ತ ಹೋರಾಟದ ಮುಖಂಡರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಜೊತೆಗೆ ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಭೇಟಿಗೆ ಸಮಯಾವಕಾಶವನ್ನೂ ಕೇಳಲಾಗಿದೆ. ಆದರೆ ದಸರಾ ಸೇರಿದಂತೆ ಇನ್ನಿತರ ಕಾರಣಗಳಿಂದ ಮುಖ್ಯಮಂತ್ರಿ ಭೇಟಿ ಸಾಧ್ಯವಾಗಿಲ್ಲ ಎಂದು ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಹೇಳಿದರು. ‘ತಮ್ಮ ಮನವಿಯನ್ನು ಮುಖ್ಯಮಂತ್ರಿ ಪುರಸ್ಕರಿಸುತ್ತಾರೆ ಎಂಬ ವಿಶ್ವಾಸವಿದೆ. ದಸರಾ ಮುಗಿಯುವವರೆಗೆ ಕಾಯೋಣ. ಆ ನಂತರ ನಮ್ಮ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.