ADVERTISEMENT

ವಿಜೃಂಭಣೆಯ ಹರಿಹರ ಕಲ್ಲುಗಾಲಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 14:40 IST
Last Updated 13 ಏಪ್ರಿಲ್ 2025, 14:40 IST
ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಗಾಂಧಿಚೌಕದಲ್ಲಿ ಹರಿ-ಹರ ಕಲ್ಲಿಗಾಲಿ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. 
ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಗಾಂಧಿಚೌಕದಲ್ಲಿ ಹರಿ-ಹರ ಕಲ್ಲಿಗಾಲಿ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.    

ವಿಜಯಪುರ(ದೇವನಹಳ್ಳಿ): ಪಟ್ಟಣದಲ್ಲಿ ಹರಿ-ಹರರ ಕಲ್ಲುಗಾಲಿ ಬ್ರಹ್ಮರಥೋತ್ಸವ ಹಾಗೂ ಬಲಮುರಿ ವಿನಾಯಕ, ಶ್ರೀಭದ್ರಕಾಳಿ ಸಮೇತ ರುದ್ರದೇವರ ಕಲ್ಲುಗಾಲಿ ರಥೋತ್ಸವ ಶನಿವಾರ ನೆರವೇರಿತು.

ರುದ್ರದೇವರ ರಥೋತ್ಸವವನ್ನು ಮಕ್ಕಳು ಎಳೆದಿದ್ದು ವಿಶೇಷವಾಗಿತ್ತು. ರಥೋತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು. ನಗರೇಶ್ವರಸ್ವಾಮಿ ಅನ್ನದಾಸೋಹ ಸಮಿತಿಯಿಂದ ನವಗ್ರಹ ದೇವಾಲಯದ ಆವರಣದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು.

ರಥೋತ್ಸವಕ್ಕೆ ಬಾಳೆಹಣ್ಣಿನ ಬದಲಿಗೆ ಹೂ ಎರಚಿ ಎಸೆದು ಜನ ಭಕ್ತಿ,ಭಾವ ಮೆರೆದರು. ನಗರೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತಮಟೆ ವಾದನ, ಮಂಗಳವಾದ್ಯ, ವೀರಗಾಸೆ ಕುಣಿತ ಮೂಲಕ ತಂದು ಮೂರು ಬಾರಿ ಪ್ರದಕ್ಷಿಣೆ ಮಾಡಿದ ನಂತರ ರಥದಲ್ಲಿ ಕೂರಿಸಲಾಯಿತು.

ADVERTISEMENT

ಎಲ್ಲಮ್ಮದೇವಿ ಕರಗದ ಪೂಜಾರಿ ದೇವರಾಜ್‌ ಅವರು, ವೀರಕುಮಾರರು ಹಾಗೂ ಹಿರಿಯ ಮುಖಂಡರೊಂದಿಗೆ ಪೂಜಾ ಸಾಮಾಗ್ರಿಗಳೊಂದಿಗೆ ಬಂದು ಎರಡೂ ರಥಗಳಿಗೆ ಪೂಜೆ ಸಲ್ಲಿಸಿದರು. ಗ್ರಾಮದ ಮುಖಂಡರು ಪೂಜೆ ಸಲ್ಲಿಸಿದ ನಂತರ ರಥಕ್ಕೆ ಚಾಲನೆ ನೀಡಲಾಯಿತು. ಕಬ್ಬಿಣದ ಸರಪಳಿಗಳನ್ನು ಹಿಡಿದ ಜನರು ರಥವನ್ನು ಎಳೆದರು.

ಮಕ್ಕಳು ಎಳೆದ ರಥ: ಬಲಮುರಿ ವಿನಾಯಕ, ಶ್ರೀಭದ್ರಕಾಳಿ ಸಮೇತ ರುದ್ರದೇವರ ಕಲ್ಲುಗಾಲಿ ರಥವನ್ನು ಮಕ್ಕಳು ಎಳೆದರು. ಗೋವಿಂದ ನಾಮಸ್ಮರಣೆ ಮಾಡುತ್ತಾ, ಉತ್ಸಾಹದಿಂದ ರಥವನ್ನು ಗಂಗಾತಾಯಿ ದೇವಾಲಯದವರೆಗೂ ಎಳೆದು ತಂದರು. ಗಾಂಧಿಚೌಕದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ವಿವಿಧ ಬಗೆಯ ಸಿಹಿ ತಿಂಡಿಗಳ ಅಂಗಡಿಗಳು ತಲೆ ಎತ್ತಿದ್ದವು. ರಥೋತ್ಸವಕ್ಕೆ ಬಂದಿದ್ದ ಜನರಿಗೆ ಅಂಗಡಿಗಳ ವರ್ತಕರು, ದಾನಿಗಳು ಕೋಸಂಬರಿ, ಪಾನಕ, ಮಜ್ಜಿಗೆ ವಿತರಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.