ADVERTISEMENT

ಸಿಂಗಪುರ ಮಾದರಿ ದಿಗ್ಬಂಧನ ಹೇರಿ

ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಿ, ಪರ್ಯಾಯ ವ್ಯವಸ್ಥೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 13:45 IST
Last Updated 19 ಮಾರ್ಚ್ 2020, 13:45 IST
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ ಇದ್ದರು
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ ಇದ್ದರು   

ದೇವನಹಳ್ಳಿ: ಆತಂಕ ಸೃಷ್ಟಿಸುತ್ತಿರುವ ಕೊರೊನಾ ವೈರಸ್ ಬಗ್ಗೆ ಸ್ವಯಂಪ್ರೇರಿತ ಎಚ್ಚರಿಕೆ ವಹಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ್ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಾತನಾಡಿದ ಅವರು, ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕಿನ ಆರೋಗ್ಯಾಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಕೊರೊನಾ ತಡೆಗಟ್ಟಲು ತೀವ್ರ ನಿಗಾವಹಿಸಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅವರ ಜತೆಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕಾಗಿದೆ ಎಂದು ಹೇಳಿದರು.

ಸರ್ಕಾರ ವಿದೇಶದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ಹೇರಬೇಕು. ಸಿಂಗಪುರ ಮಾದರಿಯಲ್ಲಿ ಸ್ವಯಂ ದಿಗ್ಬಂಧನ ಹಾಕಿದರೆ ಮಾತ್ರ ತ್ವರಿತವಾಗಿ ತಡೆಗಟ್ಟಲು ಸಾಧ್ಯವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಇದರ ಬಗ್ಗೆ ಚಿಂತಿಸಬೇಕು. ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ವಿದೇಶದಲ್ಲೇ ಉತ್ತಮ ಚಿಕಿತ್ಸೆ ಲಭ್ಯವಿರುವುದರಿಂದ ಇಲ್ಲಿಗೆ ಬಂದು ಭಯ ಹುಟ್ಟಿಸುವ ಅವಶ್ಯ ಇಲ್ಲ ಎಂದು ಹೇಳಿದರು.

ADVERTISEMENT

‌ಮಸೀದಿ, ಮಂದಿರ, ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬಾರದು. ‌ಐಷಾರಾಮಿ ಬಸ್ ಸಂಚಾರ, ರೈಲ್ವೆ ಸಂಚಾರ ಕನಿಷ್ಠ 20ದಿನಗಳ ಕಾಲ ಸ್ಥಗಿತಗೊಳಸಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜನಸಂದಣಿ ಇರುವ ಸ್ಥಳಗಳಲ್ಲಿ ಸ್ಯಾನಿಟೇಶನ್ ಮತ್ತು ಹ್ಯಾಂಡ್ ವಾಶ್‌ ಇಟ್ಟು ಸ್ವಚ್ಛತೆ ಕಾಯ್ದುಕೊಳ್ಳವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಎಲ್ಲ ಸರ್ಕಾರಿ ಕಚೇರಿಯಲ್ಲಿ ಸ್ಯಾನಿಟೇಶನ್ ಹ್ಯಾಂಡ್ ವಾಶ್‌ ಇಡಬೇಕು. ಬಯೊಮೆಟ್ರಿಕ್ ಗೆ ಹೆಬ್ಬೆಟ್ಟು ನೀಡಬಾರದು. ನೂರಾರು ಟೆಕಿಗಳು ಕೆಲಸ ಮಾಡುವ ಖಾಸಗಿ ಕಂಪನಿಗಳು ಮತ್ತು ಕಾರ್ಖಾನೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕರು ದಿನಸಿ ಇತರ ತರಕಾರಿಗಳನ್ನು ಕನಿಷ್ಠ 10ದಿನಗಳವರೆಗೆ ಖರೀದಿಸಿ ಹೊರಗೆ ಸಂಚಾರ ಕಡಿಮೆ ಮಾಡಬೇಕು. ಸರ್ಕಾರದ ಆದೇಶ ಪಾಲಿಸುವುದರ ಜತೆಗೆ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.