ADVERTISEMENT

ದೇವನಹಳ್ಳಿ | ಸಕಾಲದಲ್ಲಿ ಅಹವಾಲು ಇತ್ಯರ್ಥಕ್ಕೆ ಸೂಚನೆ

ಕುಂದು ಕೊರತೆ ಸಭೆಯಲ್ಲಿ ಸಚಿವ ಕೆ.ಎಚ್‌. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 22:58 IST
Last Updated 21 ಜುಲೈ 2025, 22:58 IST
ದೇವನಹಳ್ಳಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಸಾರ್ವಜನಿಕರು ಅಹವಾಲು ಆಲಿಸಿದರು
ದೇವನಹಳ್ಳಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಸಾರ್ವಜನಿಕರು ಅಹವಾಲು ಆಲಿಸಿದರು   

ದೇವನಹಳ್ಳಿ: ಸಾರ್ವಜನಿಕರು ಸಲ್ಲಿಸುವ ಅಹವಾಲುಗಳನ್ನು ಸಕಾಲದಲ್ಲಿ ಇತ್ಯರ್ಥಪಡಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ಸಾರ್ವಜನಿಕರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ನಮ್ಮ ಸರ್ಕಾರ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದೆ. ಒಂದೇ ವೇದಿಕೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದ್ದು, ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ADVERTISEMENT

ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತ ಪರಿಹಾರೋಪಾಯ ಕಂಡು ಕೊಳ್ಳಬೇಕು. ಕೋರ್ಟ್, ಪೊಲೀಸ್, ತನಿಖೆ ಮುಂತಾದ ಅಹವಾಲುಗಳನ್ನು ಬಿಟ್ಟು ಉಳಿದ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡಿ ಎಂದು ನಿರ್ದೇಶಿಸಿದರು.

ನಿವೇಶನ, ವಸತಿ ರಹಿತರಿಗೆ ಮೊದಲ ಆದ್ಯತೆ ದೇವನಹಳ್ಳಿಗೆ 1,000 ಮನೆ ಮಂಜೂರು ಮಾಡಲಾಗಿದೆ. ಆದಷ್ಟು ಶೀಘ್ರ ಅದನ್ನು ವಸತಿ ರಹಿತ ಅರ್ಹರಿಗೆ ನೀಡಬೇಕಿದೆ. 2,500 ನಿವೇಶನ ನೀಡುವ ಗುರಿ ಹೊಂದಲಾಗಿದ್ದು ನಿವೇಶನ ಅಭಿವೃದ್ಧಿ ಪಡಿಸುವ ಕಾರ್ಯ ಭರದಿಂದ ಸಾಗಿದೆ. ಕೆಲವು ಭಾಗಗಳಲ್ಲಿ ಕೋರ್ಟ್ ಕೇಸ್, ಅರಣ್ಯ ಒತ್ತುವರಿ ಅಡೆತಡೆ ಆಗುತ್ತಿದೆ. ಅಂತಹ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ವಿಶೇಷ ಪ್ರಾತಿನಿಧ್ಯ ನೀಡಿ ಎಂದರು.

ಕೊಡಗುರ್ಕಿಯಲ್ಲಿ 6 ಎಕರೆ ನಿವೇಶನಕ್ಕೆ ಜಾಗ ಮಂಜೂರಾಗಿದೆ. ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಹಾಗೇ ಉಳಿದಿದೆ, ಅದನ್ನು ಒಂದು ವಾರದಲ್ಲಿ ಸರಿಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ವಸತಿ ಆಗಲಿ ಅಥವಾ ನಿವೇಶನ ಆಗಲಿ ಅರ್ಹ ಬಡವರಿಗೆ, ನಿವೇಶನ ರಹಿತರಿಗೆ, ವಸತಿ ರಹಿತರಿಗೆ ಸಿಗಬೇಕು. ಫಲಾನುಭವಿಗಳ ಆಯ್ಕೆ ನಿಷ್ಪಕ್ಷಪಾತವಾಗಿರಬೇಕು. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೇ ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ಎಂದರು.

ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಕೆ.ಎನ್ ಅನುರಾಧ, ತಹಶೀಲ್ದಾರ್ ಅನಿಲ್, ಇಒ ಶ್ರೀನಾಥ್ ಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ತಾಲ್ಲೂಕು ಅಧ್ಯಕ್ಷ ಜಗನ್ನಾಥ, ಜಿಲ್ಲಾ ಉಪಾಧ್ಯಕ್ಷ ನಾರಾಯಣಸ್ವಾಮಿ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಸಾರ್ವಜನಿಕರು ಸಮಸ್ಯೆ ಹೊತ್ತು ಅಧಿಕಾರಿಗಳ ಬಳಿ ಬರುತ್ತಾರೆ. ಅಧಿಕಾರಿಗಳು ಸಾರ್ವಜನಿಕರ ಭೇಟಿಗೆ ಸಮಯ ನಿಗದಿಪಡಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು.

–ಕೆ.ಎಚ್‌. ಮುನಿಯಪ್ಪ ಸಚಿವ

ಮಂಜೂರಾದ ಜಾಗ ಮತ್ತೆ ಗುರುತು: ಸಮೀಕ್ಷೆಗೆ ಸೂಚನೆ ದೇವನಹಳ್ಳಿಯ ಗೊಬ್ಬರಗುಂಟೆ ಯಲ್ಲಿ ನಿವೇಶನ ಹಂಚಿಕೆಗೆ ಗುರುತಿಸಿರುವ ಜಾಗವು ಈ ಹಿಂದೆಯೇ ಮಂಜೂರಾಗಿ ಹಕ್ಕು ಪತ್ರ ನೀಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಇದರ ಬಗ್ಗೆ ತಹಶೀಲ್ದಾರ್ ಸರ್ವೆ ಅರಣ್ಯ ಅಧಿಕಾರಿಗಳು ಜಂಟಿಯಾಗಿ ಸರ್ವೆ ಕಾರ್ಯ ನಡೆಸಿ ವಾಸ್ತವ ಸ್ಥಿತಿ ಬಗ್ಗೆ ವರದಿ ನೀಡಿ ಎಂದು ಸಚಿವ ಕೆ. ಎಚ್‌. ಮುನಿಯಪ್ಪ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.