ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ: ₹ 30 ಲಕ್ಷ ವಾಪಸ್‌

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 9:41 IST
Last Updated 6 ಜೂನ್ 2020, 9:41 IST

ದೇವನಹಳ್ಳಿ: ‘ತಾಲ್ಲೂಕು ಪಂಚಾಯಿತಿಗೆ ಬಿಡುಗಡೆಯಾಗಿರುವ ವಾರ್ಷಿಕ ಅನುದಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ₹ 30 ಲಕ್ಷ ಅನುದಾನ ಸರ್ಕಾರಕ್ಕೆ ಹಿಂದಿರುಗಿದೆ’ ಎಂಬುದಾಗಿ ತಾಲ್ಲೂಕು ಪಂಚಾಯಿತಿ ಸದಸ್ಯ ಆರೋಪಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯತಿ ಕಚೇರಿಯಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ‘ಸರ್ಕಾರ ಒಂದು ಗ್ರಾಮ ಪಂಚಾಯಿತಿಗೆ ಬಿಡುಗಡೆ ಮಾಡುವಷ್ಟು ಅನುದಾನ ಇಡಿ ತಾಲ್ಲೂಕು ಪಂಚಾಯಿತಿಯಲ್ಲಿರುವ 15 ಸದಸ್ಯರಿಗೆ ನೀಡುವುದಿಲ್ಲ. ವಾರ್ಷಿಕವಾಗಿ ಸರ್ಕಾರ ನೀಡುವ ತಾಲ್ಲೂಕು ಪಂಚಾಯಿತಿ ಸದಸ್ಯರ ಅನುದಾನ ಕೇವಲ ₹ 2 ಕೋಟಿ. ಇದನ್ನು ಸಮರ್ಪಕವಾಗಿ ಕ್ರಿಯಾ ಯೋಜನೆ ಮಾಡಿ ಸಕಾಲದಲ್ಲಿ ಅಗತ್ಯವಿರುವ ಅನುದಾನ ಬೇಡಿಕೆಯಂತೆ ಅಗತ್ಯ ಪರಿಕರ ಖರೀದಿಗೆ ಮುಂದಾಗದ ಕಾರಣ ಅನುದಾನ ಸರ್ಕಾರಕ್ಕೆ ಹಿಂದಿರುಗಿದೆ’ ಎಂದು ದೂರಿದರು.

‘ಪಂಚಾಯಿತಿ ಸದಸ್ಯರ ಅನುದಾನದಲ್ಲಿ ಮೀಸಲಿಟ್ಟ ಅಂಗವಿಕಲರ ಅನುದಾನ ಶೇ 5ರಷ್ಟು 10 ಲಕ್ಷದ ಜತೆಗೆ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಿರುವ ಹಣ ₹ 20 ಲಕ್ಷ ಸರ್ಕಾರದ ಬೊಕ್ಕಸಕ್ಕೆ ಸೇರಿದೆ. ತಾಲ್ಲೂಕು ಪಂಚಾಯಿತಿ ಆಡಳಿತ ಕಚೇರಿಯಲ್ಲಿ ಜವಾಬ್ದಾರಿ ಹೊತ್ತ ಅಧಿಕಾರಿಗಳು ಸಕಾಲದಲ್ಲಿ ಕರ್ತವ್ಯ ನಿರ್ವಹಿಸಿದ್ದರೆ ಹತ್ತಾರು ಅಂಗವಿಕಲರಿಗೆ ಅನುಕೂಲವಾಗುತ್ತಿತ್ತು. ಅನುದಾನ ಸದ್ಬಳಕೆ ಮಾಡಿ ಅರ್ಹರಿಗೆ ನೀಡುವಲ್ಲಿ ಅಧಿಕಾರಿಗಳ ವಿಫಲರಾಗಿದ್ದಾರೆ ಸಕಾಲದಲ್ಲಿ ಖಜಾನೆಗೆ ಬಿಲ್ಲು ಪಾವತಿಸಿಲ್ಲ ಇದೊಂದು ಬೇಜವಾಬ್ದಾರಿ ಕೆಲಸ’ ಎಂದು ಅವರು ದೂರಿದರು.

ADVERTISEMENT

ಇಲಾಖೆ ಮಾರ್ಗಸೂಚಿಯಂತೆ ಮಾರ್ಚ್‌ 31ಕ್ಕೆ ಪ್ರತಿಯೊಂದು ಇಲಾಖೆಗಳ ಬಿಲ್‌ ಪಾಸ್‌ಗೆ ಅಂತಿಮ ದಿನ. ಇದಕ್ಕೆ ಮೊದಲ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾದು ಹತ್ತು ದಿನ ಕಳೆದರೂ ಇತ್ತ ಅವರ ಸುಳಿವಿಲ್ಲ. ಅಂತಿಮ ದಿನ ಮಾರ್ಚ್‌ 31ಕ್ಕೆ ಕಂಪ್ಯೂಟರ್ ಲಾಕ್ ಆಗುವುದು ಸಹಜ ಪ್ರಕ್ರಿಯೆ, ಅದು ಪಂಚಾಯಿತಿ ಅಧಿಕಾರಿಗಳ ಎಡವಟ್ಟು ಖಜಾನೆ ಅಧಿಕಾರಿಗಳದ್ದಲ್ಲ ಎಂಬುದಾಗಿ ಖಜಾನೆ ಅಧಿಕಾರಿ ನವೀನ್ ಸ್ಪಷ್ಟನೆ ನೀಡಿದರು.

ಮಾರ್ಚ್‌ 31ರ ನಂತರ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದೇನೆ. ₹ 30 ಲಕ್ಷ ಸರ್ಕಾರಕ್ಕೆ ಹಿಂದಿರುಗಿದ ಮಾಹಿತಿ ಇದೆ. ಕೊರೊನದಿಂದಾಗಿ ಆಡಳಿತ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕಾರಣವೂ ಇರಬಹುದು ಎಂಬುದಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತ ಕುಮಾರ್ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.