ವಿಜಯಪುರ(ದೇವನಹಳ್ಳಿ): ಎಚ್.ಎನ್.ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಹರಿಯುತ್ತಿರುವ ನೀರಿನ ಜೊತೆಗೆ, ಕಳೆದ ಅಕ್ಟೋಬರ್‌ನಲ್ಲಿ ಬಿದ್ದ ಉತ್ತಮ ಮಳೆಯಿಂದ ಕೆರೆಗಳು ಭರ್ತಿಯಾಗುತ್ತಿದ್ದಂತೆ ತೋಡುಬಾವಿಗಳಲ್ಲಿ ನೀರು ಕಾಣಿಸಿಕೊಂಡಿದ್ದು ರೈತರಲ್ಲಿ ಸಂತಸ ಮೂಡಿದೆ.
ಮೂರು ದಶಕಗಳ ಹಿಂದೆ 100 ಅಡಿಗಳಷ್ಟು ಆಳದ ತೋಡುಬಾವಿಗಳಿಂದ ನೀರು ತೆಗೆದು, ಕೃಷಿ ಮಾಡುತ್ತಿದ್ದ ರೈತರು, ಕ್ರಮೇಣ ಅಂತರ್ಜಲದ ಮಟ್ಟ ಕುಸಿತದಿಂದ ತೋಡುಬಾವಿ ಮುಚ್ಚಿ ಕೊಳವೆಬಾವಿ ಕೊರೆಯಿಸುತ್ತಿದ್ದಾರೆ. ಕೆಲವು ರೈತರು ತೋಡು ಬಾವಿಗಳನ್ನು ಮುಚ್ಚದೆ ಹಾಗೇ ಬಿಟ್ಟಿದ್ದರು.
ಕೆರೆಗಳಿಗೆ ನೀರು ತುಂಬಿಸುವುದಕ್ಕಾಗಿ ಎಚ್.ಎನ್. ವ್ಯಾಲಿ ಯೋಜನೆ ಜಾರಿಗೆ ತಂದು ಹರಿಸಿದ್ದರ ಪರಿಣಾಮ ಎರಡು ವರ್ಷಗಳ ಹಿಂದೆ ಈ ಭಾಗದಲ್ಲಿನ ಕೆರೆಗಳು ಭರ್ತಿಯಾಗಿ ಕೋಡಿ ಹರಿದು, ಎರಡೇ ವರ್ಷದಲ್ಲಿ ಬತ್ತಿಹೋಗುವ ಹಂತಕ್ಕೆ ತಲುಪಿದ್ದವು. ಪುನಃ ಎರಡು ವರ್ಷದ ನಂತರ ನೀರು ಹರಿಯುವುದರ ಜೊತೆಗೆ ಉತ್ತಮವಾಗಿ ಮಳೆಯಾಗಿರುವ ಕಾರಣ, ಈಗ ಕೆರೆಗಳು ಭರ್ತಿಯಾಗಿ ಅಂತರ್ಜಲದ ಮಟ್ಟ ವೃದ್ಧಿಯಾಗುತ್ತಿದೆ.
ಇನ್ನೆರಡು ವರ್ಷಗಳ ಕಾಲ ಕೆರೆಯಲ್ಲಿ ನೀರು ಇಂಗದೆ ಇದ್ದರೆ ಮೂರು ದಶಕಗಳ ಹಿಂದಿನ ಗತವೈಭವ ಮರುಕಳಿಸಲಿದೆ. ಈ ಭಾಗದ ರೈತರು ಭೂಮಿಯಲ್ಲಿ ಹಣ್ಣು, ತರಕಾರಿಗಳು ಬೆಳೆಯುವುದಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ ಎಂದು ರೈತ ಸುದರ್ಶನರೆಡ್ಡಿ ಸಂತಸ ವ್ಯಕ್ತಪಡಿಸಿದರು.
ಕಲ್ಲಿನ ಕಟ್ಟಡದ ಬಾವಿಗಳು ಮಾತ್ರ ಉಳಿದಿವೆ: ಹಿಂದೆ ಹಿರಿಯರು ನೀರಿಗಾಗಿ ಬಾವಿ ತೋಡಿದಾಗ ಕೆಲವರು, ಬಾವಿಯ ಗೋಡೆಗಳಿಗೆ ಸುತ್ತಲೂ ಕಲ್ಲಿನ ಕಟ್ಟೆ ಕಟ್ಟುತ್ತಿದ್ದರು. ಇದರಿಂದ ಬಾವಿಯ ಗೋಡೆಗಳು ಕುಸಿದು ಬಿದ್ದಿಲ್ಲ. ಕಲ್ಲು ಕಟ್ಟಿಸದ ಬಾವಿಗಳು ಕುಸಿದು ಬಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಕಾರಣ, ರೈತರು ಮುಚ್ಚಿದಿದ್ದಾರೆ. ಕೆಲವರು ತೋಟಗಳಲ್ಲಿ ಕಸಕಡ್ಡಿಯನ್ನು ತುಂಬಿಸುವುದಕ್ಕಾಗಿ ಬಾವಿಗಳನ್ನು ಉಪಯೋಗಿಸುತ್ತಿದ್ದಾರೆ ಎಂದು ರೈತರು ಹೇಳುತ್ತಾರೆ.
30 ವರ್ಷಗಳ ಹಿಂದೆ ಬಾವಿ ಅಗೆಯುವಾಗ 50 ಅಡಿಗಳಿಗೆ ನೀರು ಸಿಕ್ಕಿತ್ತು. ಚಿತ್ತೂರಿನಿಂದ ಪರಿಣಿತರನ್ನು ಕರೆಯಿಸಿ ಕಲ್ಲು ಕಟ್ಟಿಸಿದೆವು. ಗರಂಡಾ ಹೊಡೆದಿದ್ದವು. ಆದ್ದರಿಂದ ಬಾವಿ ಉಳಿದುಕೊಂಡಿದೆ. ಇಲ್ಲವಾದರೆ ನೀರಿನ ಜೌಗಿನಿಂದ ಮುಚ್ಚಿಹೋಗುತ್ತಿತ್ತು. ಬಾವಿಯಲ್ಲಿ ನೀರು ಬಂದಿರುವುದು ನಮ್ಮ ಸೌಭಾಗ್ಯನಾರಾಯಣಸ್ವಾಮಿ ಬಮೂಲ್ ಮಾಜಿ ನಿರ್ದೇಶಕ ದಂಡಿಗಾನಹಳ್ಳಿ
ಮೂರು ದಶಕಗಳ ನಂತರ ಕೆರೆಗಳು ಭರ್ತಿಯಾಗಿದ್ದು ತೋಡುಬಾವಿಗಳಲ್ಲಿ ನೀರು ಉಕ್ಕಿಬಂದಿರುವುದು ಸಂತಸದ ವಿಷಯ. ಆದರೂ ಬಾವಿಗಳಲ್ಲಿ ಉಕ್ಕಿ ಬಂದಿರುವ ನೀರು ಎಷ್ಟರ ಮಟ್ಟಿಗೆ ಬಳಕೆಗೆ ಯೋಗ್ಯವಾಗಿವೆ ಎನ್ನುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ದೃಢಪಡಿಸಬೇಕು ಎಂದು ನೀರಾವರಿ ಹೋರಾಟಗಾರ ಕಲ್ಯಾಣ್ ಕುಮಾರ್ ಬಾಬು ಹೇಳಿದ್ದಾರೆ. ಎಚ್.ಎನ್.ವ್ಯಾಲಿ ಯೋಜನೆಯಡಿ ಹರಿದಿರುವ ನೀರು ಮೂರು ಹಂತದಲ್ಲಿ ಶುದ್ಧೀಕರಣವಾಗಿಲ್ಲ. ಕೆರೆಗಳಲ್ಲಿ ಸಂಗ್ರಹಗೊಂಡಿರುವ ನೀರು ಕಪ್ಪು ಬಣ್ಣದಲ್ಲಿವೆ. ನೀರಿನಲ್ಲಿ ರಾಸಾಯನಿಕ ಅಂಶಗಳಿವೆ ಎಂದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಕೆರೆಗಳ ಆವರಣದಲ್ಲೂ ಕೊಳವೆಬಾವಿಗಳಿವೆ. ಅವುಗಳಿಂದ ಪಟ್ಟಣದ ಜನತೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಖಚಿತ ಪಡಿಸಿದ ನಂತರವೇ ರೈತರು ತೋಟಗಳಿಗೆ ಉಪಯೋಗ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
‘ನಾವು ಹಿಂದೆ ಒಂದು ಬಾವಿ ತೆಗೆಯಬೇಕಾದರೆ ಸುಮಾರು 12 ಮಂದಿ ಕೆಲಸ ಮಾಡುತ್ತಿದ್ದರು. ದಿನಕ್ಕೆ ಎರಡು ಅಡಿಗಳಷ್ಟು ಮಣ್ಣು ತೆಗೆಯುತ್ತಿದ್ದೇವು ಮೂರು ತಿಂಗಳು ಅಗೆಯುವ ಕೆಲಸ ಹಿಡಿಯುತ್ತಿತ್ತು. ಒಂದು ಬಾವಿ ಅಗೆಯುವುದಕ್ಕೆ ₹50 ಸಾವಿರ ಖರ್ಚು ಬರುತ್ತಿತ್ತು.( ಇವಾಗಿನ ಲೆಕ್ಕೆ ₹4-5 ಲಕ್ಷ) ಆಗ ತಂತ್ರಜ್ಞಾನ ಇರಲಿಲ್ಲ. ಎತ್ತುಗಳು ಮತ್ತು ಹಗ್ಗದ ಸಹಾಯದಿಂದ ಮಂಕರಿಗಳಲ್ಲಿ ಮಣ್ಣು ಮೇಲೆತ್ತುತ್ತಿದ್ದೇವು. ಸುಮಾರು 20 ಮಟ್ಟುಗಳು (100 ಅಡಿಗಳು) ಆಳ 24 ಅಡಿಗಳಷ್ಟು ಅಗಲವಾಗಿ ಅಗೆದಿದ್ದೇವೆ ಎಂದು ಹಿರಿಯ ವಸಂತಪ್ಪ ನೆನಪಿಸಿಕೊಳ್ಳುತ್ತಾರೆ. ಬಾವಿಯಲ್ಲಿ ಅಳವಡಿಸುತ್ತಿದ್ದ ಕಪ್ಲಿಂಗ್ ಮೋಟಾರು ರಿಪೇರಿ ಮಾಡಬೇಕಾದರೆ ಇಳಿದು ಹತ್ತುವುದಕ್ಕೆ ಬಾವಿಯಿಂದ ಐದಾರು ಅಡಿಗಳ ದೂರದಲ್ಲಿ 3-4 ಅಡಿಗಳಷ್ಟು ವ್ಯಾಸವಿರುವ ಚಿಕ್ಕಬಾವಿ ಅಗೆಯುತ್ತಿದ್ದೇವು. ಅದರಲ್ಲಿ ಇಳಿದು ಹತ್ತುವುದಕ್ಕೆ ಮೆಟ್ಟಿಲುಗಳನ್ನು ಗೋಡೆಯಲ್ಲಿ ಕೊರೆಯುತ್ತಿದ್ದೇವು. ಹಗ್ಗದ ಸಹಾಯವಿಲ್ಲದೆ ಕೈಗಳ ಸಹಾಯದಿಂದ ಇಳಿದು ಹತ್ತುತ್ತಿದ್ದರು. ಬೆಳಕಿನ ವ್ಯವಸ್ಥೆಯೂ ಇರುತ್ತಿರಲಿಲ್ಲ ಎಂದ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.