ADVERTISEMENT

ದೇವನಹಳ್ಳಿ| ವಾರಾಂತ್ಯ: ರಸ್ತೆಯಲ್ಲಿ ರೀಲ್ಸ್‌ ಸಾಹಸ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 4:08 IST
Last Updated 13 ಮಾರ್ಚ್ 2023, 4:08 IST
ವಿಜಯಪುರ ಪಟ್ಟಣದ ಹೊರವಲಯದ ಗೋ ಶಾಲೆಯ ಬಳಿ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಚಾಲನೆ ಮಾಡುವುದನ್ನು ಚಿತ್ರೀಕರಣ ಮಾಡುತ್ತಿರುವ ಯುವಕರು
ವಿಜಯಪುರ ಪಟ್ಟಣದ ಹೊರವಲಯದ ಗೋ ಶಾಲೆಯ ಬಳಿ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಚಾಲನೆ ಮಾಡುವುದನ್ನು ಚಿತ್ರೀಕರಣ ಮಾಡುತ್ತಿರುವ ಯುವಕರು   

ವಿಜಯಪುರ(ದೇವನಹಳ್ಳಿ): ಹೊರವಲಯದ ದೇವನಹಳ್ಳಿಯ ಮುಖ್ಯರಸ್ತೆಯಲ್ಲಿ ವಾರಾಂತ್ಯದಲ್ಲಿ ಯುವಕರು ರೀಲ್ಸ್‌ ಮಾಡಲು ದ್ವಿ ಚಕ್ರ ವಾಹನಗಳನ್ನು ವೇಗವಾಗಿ ಚಾಲನೆ ಮಾಡುವುದು ಹಾಗೂ ಸಾಹಸ ಮಾಡುವ ಚಾಳಿ ಜಾಸ್ತಿಯಾಗಿದ್ದು, ಅದೇ ರಸ್ತೆಯಲ್ಲಿ ಸಂಚಾರಿಸುವ ಇತರೆ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ.

ಶನಿವಾರ ಮತ್ತು ಭಾನುವಾರದಂದು ದುಬಾರಿ ದ್ವಿಚಕ್ರ ವಾಹನಗಳಲ್ಲಿ ಬರುವ ಯುವಕರು ವೇಗ ಚಾಲನೆ ಮತ್ತು ಸಾಹಸ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಾರೆ. ಇದಕ್ಕಾಗಿ ಸ್ವಾಗತ ಕಮಾನಿನಿಂದ ಗೋ ಶಾಲೆಯ ಗೇಟ್ ವರೆಗೂ ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ. ವ್ಹೀಲಿಂಗ್ ಮಾಡುತ್ತಾರೆ. ಯುವಕರು ಈ ರೀತಿಯಾಗಿ ಮಾಡುತ್ತಿರುವುದರಿಂದ ದ್ವಿಚಕ್ರ ವಾಹನಗಳಿಂದ ಉಂಟಾಗುತ್ತಿರುವ ಕರ್ಕಶ ಶಬ್ದಗಳಿಂದ ಜನರು ಹೈರಾಣಾಗುತ್ತಿದ್ದಾರೆ. ಪೊಲೀಸರು ಇಂತವರ ಮೇಲೆ ಕ್ರಮ ಜರುಗಿಸಬೇಕು. ಮುಖ್ಯರಸ್ತೆಯಲ್ಲಿ ಪೊಲೀಸರ ಗಸ್ತು ನಿಯೋಜಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

‘ಕಾಲೇಜು ಬಿಟ್ಟಾಗ ಕೆಲವರು ವೇಗವಾಗಿ ವಾಹನ ಚಲಾಯಿಸುವುದು, ವ್ಹೀಲಿಂಗ್‌ ಮಾಡುವುದು, ವಾರಾಂತ್ಯದ ದಿನಗಳಲ್ಲಿ ಸಾಹಸ ಮಾಡುವ ಕುರಿತು ದೂರುಗಳು ಬಂದಿವೆ. ಅಂತಹ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು. ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪ್ರಕರಣ ದಾಖಲು ಮಾಡಲಾಗುವುದು’ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಎಸ್‌.ರವಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.