ADVERTISEMENT

ಕೆರೆಗಳ ಅಭಿವೃದ್ಧಿಗೆ ಕೈಜೋಡಿಸಿ: ಎಡಿಸಿ ಜಗದೀಶ್ ಕೆ.ನಾಯ್ಕ

ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 3:05 IST
Last Updated 6 ಫೆಬ್ರುವರಿ 2021, 3:05 IST
ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಜಗದೀಶ್ ಕೆ.ನಾಯ್ಕ ಚಾಲನೆ ನೀಡಿದರು
ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಜಗದೀಶ್ ಕೆ.ನಾಯ್ಕ ಚಾಲನೆ ನೀಡಿದರು   

ದೇವನಹಳ್ಳಿ: ಜಿಲ್ಲೆಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅತಿ ಮುಖ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯ್ಕ ಹೇಳಿದರು.

ಇಲ್ಲಿ ವಿಶ್ವನಾಥಪುರ ಕೆರೆ ಅಂಗಳದಲ್ಲಿ ಶುಕ್ರವಾರ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆರೆ ಹೂಳು ಎತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಬೆಂಗಳೂರಿನ ತ್ಯಾಜ್ಯ ಸಂಸ್ಕರಿಸಿದ ನೀರು ತಾಲ್ಲೂಕಿನ 9 ಕೆರೆಗಳಿಗೆ ತುಂಬಿಸಲು ಸರ್ಕಾರ ಮುಂದಾಗಿದೆ. ಎತ್ತಿನಹೊಳೆ ಯೋಜನೆ ಇನ್ನೊಂದೆರಡು ವರ್ಷದಲ್ಲಿ ಈ ಭಾಗಕ್ಕೆ ಬರುವ ನಿರೀಕ್ಷೆ ಇದೆ. ಈ ಯೋಜನೆಗಿಂತ ಮೊದಲು ಸ್ಥಳೀಯ ಕೆರೆಗಳನ್ನು ಆಭಿವೃದ್ಧಿಪಡಿಸಿದರೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ADVERTISEMENT

ಗ್ರಾಮಾಂತರ ಜಿಲ್ಲೆಯಲ್ಲಿ 650 ಕೆರೆಗಳನ್ನು ಈಗಾಗಲೇ ಜಿಲ್ಲಾಡಳಿತ ವತಿಯಿಂದ ಗುರುತಿಸಲಾಗಿದೆ. ಕೆರೆ ಸಂಜೀವಿನಿ ಯೊಜನೆಯಡಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲೆಯಲ್ಲಿ ಅಂತರ್ಜಲದ ಪ್ರಮಾಣ ನಿರೀಕ್ಷೆಗಿಂತ ಕೆಳಮಟ್ಟಕ್ಕೆ ತಲುಪಿದೆ. ಕೆರೆಕುಂಟೆ, ಸ್ಮಶಾನ, ಸರ್ಕಾರಿ ಶಾಲೆ, ಗೋಕಟ್ಟೆ ಮತ್ತು ಗುಂಡುತೋಪು ತಲೆಮಾರಿನ ಆಸ್ತಿ, ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಕಳೆದೆರಡು ವರ್ಷಗಳ ಹಿಂದೆ ಸಾಮಾಜಿಕ ಹೊಣೆಗಾರಿಕೆಯಡಿ ಶೇ2ರಷ್ಟು ಖಾಸಗಿ ಕಂಪನಿಗಳ ಅನುದಾನದ ಜತೆಗೆ ಸ್ಥಳೀಯ ಗ್ರಾಮಸ್ಥರು ಮತ್ತು ದಾನಿಗಳ ಸಹಕಾರದಿಂದ ಜಿಲ್ಲೆಯಲ್ಲಿ 30 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 42 ಎಕರೆ ವಿಸ್ತೀರ್ಣದ ಕೆರೆಯಲ್ಲಿ ₹15ಲಕ್ಷ ವೆಚ್ಚದಲ್ಲಿ ಹೂಳು ತೆಗೆಯಲು ಮುಂದಾಗಿರುವುದು ಸಾರ್ಥಕ ಕಾರ್ಯಕ್ರಮ ಎಂದು ಶ್ಲಾಘಿಸಿದರು.

ತಹಶೀಲ್ದಾರ್ ಗಂಗಾಧರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಶೈಲಜಾ ಜಗದೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ ನಾರಾಯಣಸ್ವಾಮಿ, ಉಪಾಧ್ಯಕ್ಷ ವಿನಯ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಷಾ, ಕಾರ್ಯದರ್ಶಿ ಪದ್ಮಾ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ನಾಯ್ಕ, ತಾಲ್ಲೂಕು ಯೊಜನಾಧಿಕಾರಿ ಅಕ್ಷತಾ ರೈ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.