ಬೆಂಗಳೂರು: ‘ರಾಜ್ಯದಲ್ಲಿ ಮಾದಕ ವಸ್ತು ತಯಾರಿಕಾ ಘಟಕ ತಲೆ ಎತ್ತಿದ್ದರೂ ಅದನ್ನು ಗುರುತಿಸುವಲ್ಲಿ, ತಡೆಯುವಲ್ಲಿ ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆ ವಿಫಲವಾಗಿದೆ. ಇದರ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಅವರು ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಧೀರಜ್ ಮುನಿರಾಜು ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ವರ್ಷದ ಅವಧಿಯಲ್ಲಿ, ರಾಜ್ಯದಲ್ಲಿ ₹1,300 ಕೋಟಿ ಮೌಲ್ಯದಷ್ಟು ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಎಐಸಿಸಿ ಅಧ್ಯಕ್ಷರ ತವರು ಜಿಲ್ಲೆ ಕಲಬುರಗಿಯಲ್ಲಿ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೆ, ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲಿ ತಯಾರಿಕೆ ನಡೆಯುತ್ತಿತ್ತು. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ 2023ರಲ್ಲಿ, ಮಂಗಳೂರಿನಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಮಾದಕ ವಸ್ತು ವಶಕ್ಕೆ ಪಡೆಯಲಾಗಿತ್ತು. ಈಚೆಗೆ ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜುವನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇವರು ಯಾರಿಗೆ ಆತ್ಮೀಯರು ಎಂಬುದು ಬಿಡಿಸಿ ಹೇಳಬೇಕಾಗಿಲ್ಲ’ ಎಂದರು.
‘ರಾಜ್ಯದಲ್ಲಿ ಮಾದಕ ವಸ್ತುಗಳ ತಯಾರಿಕೆ ನಡೆಯುತ್ತಿದೆ ಎಂಬುದನ್ನು ಬೇರೆ ರಾಜ್ಯದ ತನಿಖಾ ತಂಡ ಪತ್ತೆ ಮಾಡಿದೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಈ ಅಕ್ರಮಕ್ಕೆ ಕೈಜೋಡಿಸಿದ ಅಧಿಕಾರಿ ಮತ್ತು ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.
* ಬಿಜೆಪಿ ಯುವ ಮೋರ್ಚಾದಿಂದ ರಾಜ್ಯದಾದ್ಯಂತ ಪ್ರತಿಭಟನೆಗೆ ಸಿದ್ಧತೆ
* ಜುಲೈ 30ರಂದು ಮೈಸೂರು ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ
* ನಂತರದ ದಿನಗಳಲ್ಲಿ ಇತರ ಜಿಲ್ಲಾ ಕೇಂದ್ರಗಳಲ್ಲಿ ಧರಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.