ADVERTISEMENT

ಬ್ಯಾನರ್‌ ತೆರವಿನಲ್ಲೂ ತಾರತಮ್ಯ: ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:14 IST
Last Updated 26 ಜನವರಿ 2023, 5:14 IST
ದೊಡ್ಡಬಳ್ಳಾಪುರದ ನಗರಸಭೆ ಮುಂಭಾಗ ಶಾಸಕ ಟಿ. ವೆಂಕಟರಮಣಯ್ಯ ನೇತೃತ್ವದಡಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ದೊಡ್ಡಬಳ್ಳಾಪುರದ ನಗರಸಭೆ ಮುಂಭಾಗ ಶಾಸಕ ಟಿ. ವೆಂಕಟರಮಣಯ್ಯ ನೇತೃತ್ವದಡಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ದೊಡ್ಡಬಳ್ಳಾಪುರ: ನಗರ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸುವಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ಶಾಸಕ ಟಿ. ವೆಂಕಟರಮಣಯ್ಯ ಅವರ ನೇತೃತ್ವದಡಿ ನಗರಸಭೆ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶಾಸಕ ವೆಂಕಟರಮಣಯ್ಯ ಮಾತನಾಡಿ, ಇಷ್ಟು ವರ್ಷಗಳ ಕಾಲ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಬ್ಯಾನರ್‌ ಕಟ್ಟುವ ಚಾಳಿ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಬ್ಯಾನರ್‌ ಕಟ್ಟುವುದೇ ಕೆಲವರಿಗೆ ದೊಡ್ಡ ಸಾಧನೆಯಾಗಿದೆ ಎಂದು ಟೀಕಿಸಿದರು.

ಸ್ಥಳೀಯ ಮಟ್ಟದ ಅಧಿಕಾರಿಗಳು ಸಹ ಒಬ್ಬೊಬ್ಬರಿಗೆ ಒಂದೊಂದು ರೀತಿಯ ನಿಯಮ ಪಾಲಿಸುತ್ತಿದ್ದಾರೆ. ಶುಲ್ಕ ಪಾವತಿ ಇಲ್ಲದೆ ಇರುವ ಯಾವುದೇ ಬ್ಯಾನರ್‌ ಕಟ್ಟಲು ಅವಕಾಶ ನೀಡಬಾರದು. ಆದರೆ, ಕೆಲವರಿಗೆ ಮಾತ್ರ ತಿಂಗಳುಗಟ್ಟಲೆ ಸಾರ್ವಜನಿಕ ರಸ್ತೆ ಬದಿಗಳಲ್ಲಿ ಬ್ಯಾನರ್‌ ಕಟ್ಟಲು ಅವಕಾಶ ನೀಡುವ ಮೂಲಕ ತಾರತಮ್ಯ ನೀತಿ ಪಾಲಿಸುತ್ತಿದ್ದಾರೆ ಎಂದು ದೂರಿದರು.

ADVERTISEMENT

ಎಲ್ಲರಿಗೂ ಒಂದೇ ರೀತಿಯ ನಿಯಮ ಪಾಲಿಸಬೇಕು. ಇಲ್ಲವಾದರೆ ಸರ್ಕಾರಿ ಕಾರ್ಯಕ್ರಮದ ಬ್ಯಾನರ್‌ಗಳನ್ನು ಹೊರತು ಯಾವುದೇ ರಾಜಕೀಯ ಪಕ್ಷ, ಸಂಘ, ಸಂಸ್ಥೆಗಳ ಬ್ಯಾನರ್‌ ಕಟ್ಟದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್‌. ಶ್ರೀನಾಥ್‌ಗೌಡ, ತಾಲ್ಲೂಕಿನ ಎಲ್ಲಾ 28 ಗ್ರಾಮ ಪಂಚಾಯಿತಿಗಳಲ್ಲೂ ಅನಧಿಕೃತವಾಗಿ ಕಟ್ಟಲಾಗಿರುವ ಬ್ಯಾನರ್‌ಗಳನ್ನು ತಕ್ಷಣ ತೆರವುಗೊಳಿಸುವಂತೆ ಈಗಾಗಲೇ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನುಮತಿ ಪಡೆದರೂ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಬ್ಯಾನರ್‌ ಕಟ್ಟಿದ್ದರೆ ತೆರವುಗೊಳಿಸಲು ಸೂಚಿಸಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷ ಕೆ.ಪಿ. ಜಗನ್ನಾಥ್‌, ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಎಂ. ಬೈರೇಗೌಡ, ಕಸಬಾ ಬ್ಲಾಕ್‌ ಅಧ್ಯಕ್ಷ ವೆಂಕಟೇಶ್‌, ಕೆಪಿಸಿಸಿ ಸದಸ್ಯ ಬಿ.ಜಿ. ಹೇಮಂತರಾಜ್‌, ಆದಿತ್ಯ ನಾಗೇಶ್‌, ಅಖಿಲೇಶ್‌, ರವಿಕುಮಾರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.