ADVERTISEMENT

ದೊಡ್ಡಬಳ್ಳಾಪುರ| ಶಾಸನಸಭೆಯಲ್ಲಿ ಮೀಸಲಿಗೆ ನಿರ್ಲಕ್ಷ್ಯ: ಕೆ.ಎಸ್‌. ಪ್ರಭಾ

ಜನಪ್ರತಿನಿಧಿಗಳ ಧೋರಣೆಗೆ ಲೇಖಕಿ ಕೆ.ಎಸ್‌. ಪ್ರಭಾ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 4:04 IST
Last Updated 9 ಮಾರ್ಚ್ 2023, 4:04 IST
ದೊಡ್ಡಬಳ್ಳಾಪುರದ ಸೂರ್ಯ ಪದವಿಪೂರ್ವ ಕಾಲೇಜು, ಶ್ರೀರಾಮ ನರ್ಸಿಂಗ್ ಕಾಲೇಜಿನ ಸಹಯೋಗದಲ್ಲಿ ಬುಧವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಲೇಖಕಿ ಕೆ.ಎಸ್. ಪ್ರಭಾ ಉದ್ಘಾಟಿಸಿದರು
ದೊಡ್ಡಬಳ್ಳಾಪುರದ ಸೂರ್ಯ ಪದವಿಪೂರ್ವ ಕಾಲೇಜು, ಶ್ರೀರಾಮ ನರ್ಸಿಂಗ್ ಕಾಲೇಜಿನ ಸಹಯೋಗದಲ್ಲಿ ಬುಧವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಲೇಖಕಿ ಕೆ.ಎಸ್. ಪ್ರಭಾ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ‘ಮಹಿಳಾ ಮೀಸಲಾತಿ ಸ್ಥಳೀಯ ಸಂಸ್ಥೆಗಳಿಗಷ್ಟೇ ಸೀಮಿತವಾಗಿದೆ. ಶಾಸನಸಭೆಯಲ್ಲೂ ಪ್ರಾತಿನಿಧ್ಯ ಲಭಿಸದಿರುವುದು ವಿಷಾದಕರ’ ಎಂದು ಲೇಖಕಿ ಕೆ.ಎಸ್. ಪ್ರಭಾ ಹೇಳಿದರು.

ನಗರದ ಸೂರ್ಯ ಪದವಿಪೂರ್ವ ಕಾಲೇಜು, ಶ್ರೀರಾಮ ನರ್ಸಿಂಗ್ ಕಾಲೇಜಿನಿಂದ ಬುಧವಾರ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ನ್ಯೂಯಾರ್ಕ್‍ನಲ್ಲಿ 1910ರಲ್ಲಿ ಮಹಿಳೆಯರಿಗೆ ಆಗುತ್ತಿದ್ದ ತಾರತಮ್ಯ, ಶೋಷಣೆ ವಿರುದ್ಧ ಧ್ವನಿ ಎತ್ತಿದ ಪ್ರತೀಕವಾಗಿ ಮಹಿಳಾ ದಿನ ಆಚರಿಸಲು ತೀರ್ಮಾನಿಸಲಾಯಿತು. ಪ್ರಪಂಚದಲ್ಲಿ ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಹಕ್ಕುಗಳು ದೊರೆಯುವಂತಾಗಬೇಕು ಎಂಬ ನಿರ್ಣಯ ಕೈಗೊಂಡರು. ಈ ರೀತಿ ದಿಟ್ಟತನ ಜಗತ್ತಿನ ಎಲ್ಲಾ ಮಹಿಳೆಯರಿಗೂ ಬಂದು ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಬೇಕು ಎಂದು ಆಶಿಸಿದರು.

ADVERTISEMENT

ಇಂದಿಗೂ ಮಹಿಳೆಗೆ ತಾನು ಮಾಡಿದ ಸಂಪಾದನೆಯ ಹಣವನ್ನು ವಿನಿಯೋಗಿಸುವ ಹಕ್ಕು ಇಲ್ಲ. ಚುನಾವಣೆಗಳಲ್ಲಿ ಮತಕ್ಕಾಗಿ ಮಾತ್ರ ಮಹಿಳೆಯರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ನಂತರ ಅವರನ್ನು ನಿರ್ಲಕ್ಷಿಸಲಾಗುತ್ತಿದೆ. ಜಾತಿ ಮೀಸಲಾತಿಗಾಗಿ ನಡೆಯುವ ತೀವ್ರ ಹೋರಾಟದಂತೆ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಯುತ್ತಿಲ್ಲ. ಈ ದಿಸೆಯಲ್ಲಿ ಮಹಿಳೆಯರು ಸ್ವಾಭಿಮಾನ, ಆತ್ಮಗೌರವದಿಂದ ಬದುಕಬೇಕು ಎಂದರು.

ನಗರ ಪೊಲೀಸ್‌ ಠಾಣೆ ಪಿಎಸ್‍ಐ ಅನಿತಾ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರು ಕೆಲಸ ಮಾಡುತ್ತಿರುವುದು ಸಂತಸದ ಸಂಗತಿ. ವೈದ್ಯಕೀಯ ಕ್ಷೇತ್ರ, ಪೊಲೀಸ್ ಇಲಾಖೆಯಲ್ಲಿ ಮಹಿಳೆಯರು ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಇಂದು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಶೋಷಣೆ ತಡೆಯಲು ಕಾನೂನು ಪ್ರಬಲವಾಗಿವೆ. ಈ ಬಗ್ಗೆ ಎಲ್ಲರಿಗೂ ಅರಿವು ಇರಬೇಕು. ಪೋಕ್ಸೊ ಕಾಯ್ದೆ ಬಗ್ಗೆ ತಿಳಿವಳಿಕೆ ಇರಬೇಕು. ತಮಗೆ ನೆರವು ಬೇಕಿದ್ದರೆ 112ಕ್ಕೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ ಎಂದರು.

ವೈದ್ಯೆ ಡಾ.ಇಂದಿರಾ ಶಾಮಪ್ರಸಾದ್ ಮಾತನಾಡಿ, ವೈಜ್ಞಾನಿಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿ ನೊಬೆಲ್ ಪ್ರಶಸ್ತಿ ಪಡೆದ ಮೇಡಂ ಕ್ಯೂರಿ ಅಂತಹವರು ನಮಗೆ ಮಾದರಿಯಾಗಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸೂರ್ಯ ಎಜುಕೇಷನಲ್ ಟ್ರಸ್ಟ್‌ ಅಧ್ಯಕ್ಷೆ ಡಾ.ಮಾಲಾ ವಿಜಯಕುಮಾರ್, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ಮಹಾವೀರ್ ಶಾಲೆಯ ಮುಖ್ಯಶಿಕ್ಷಕಿ ಬೀನಾ ಕರೋಲ್, ಕಾರ್ಮಲ್ ಜ್ಯೋತಿ ಶಾಲೆಯ ಉಪ ಪ್ರಾಂಶುಪಾಲರಾದ ನೀಮಾ ಕೊಪ್ಪಲ್, ಶುಶ್ರೂಷಕಿ ವೀಣಾ, ಉದ್ಯಮಿ ಪೂರ್ಣಿಮಾ ಭಾನುಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಶ್ರೀರಾಮ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಜಿ. ವಿಜಯಕುಮಾರ್, ಸುಜ್ಞಾನ ದೀಪಿಕಾ ಜಾಗೃತಿ ಸಂಚಾಲಕ ಎಂ.ಎಸ್. ಮಂಜುನಾಥ್, ಎಚ್‍ಇಎಚ್‍ಎಸ್ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ರಾಮಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.