ADVERTISEMENT

ಅನರ್ಹ ಸದಸ್ಯರ ಮತದಾನ: ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆ ಉರ್ಜಿತವೇ?

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 5:12 IST
Last Updated 3 ಮಾರ್ಚ್ 2026, 5:12 IST
   

ವಿಜಯಪುರ (ದೇವನಹಳ್ಳಿ): ಬೆಂಗಳೂರು ಗ್ರಾಮಾಂತರ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ವಿಜಯಪುರ ಪುರಸಭೆ ಅನರ್ಹ ಸದಸ್ಯರು ಮತದಾನ ಮಾಡಿದ್ದಾರೆ. ಇವರ ಮತದಾನದಿಂದ ಆಯ್ಕೆಯಾಗಿರುವ ಸದಸ್ಯರ ಸ್ಥಾನ ಊರ್ಜಿತವೇ? ಎಂಬ ಚರ್ಚೆ ಜಿಲ್ಲೆಯಲ್ಲಿ ತೀವ್ರಗೊಂಡಿದೆ.

ಜಿಲ್ಲಾ ಯೋಜನಾ ಸಮಿತಿ ರಚಿಸುವ ಸಲುವಾಗಿ ನಗರ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಿಂದ ಖಾಲಿ ಇದ್ದ 10 ಸ್ಥಾನಗಳಿಗೆ ಜಿಲ್ಲೆಯ ದೊಡ್ಡಬಳ್ಳಾಪುರ ನಗರಸಭೆ, ನೆಲಮಂಗಲ ನಗರಸಭೆ, ವಿಜಯಪುರ ಪುರಸಭೆ ಮತ್ತು ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿಯಿಂದ ಸದಸ್ಯರನ್ನು ಆಯ್ಕೆ ಮಾಡಲು ಫೆಬ್ರುವರಿ 7ರಿಂದ 28ರವರೆಗೆ ಚುನಾವಣಾ ಪ್ರಕ್ರಿಯೆಗಳು ನಡೆದಿತ್ತು. 

ವಿಪ್ ಉಲ್ಲಂಘನೆ ಆರೋಪದಡಿ ಅನರ್ಹಗೊಂಡ ವಿಜಯಪುರ ಪುರಸಭೆಯ ಏಳು ಮಂದಿ ಜೆಡಿಎಸ್ ಸದಸ್ಯರ ಪೈಕಿ ಆರು ಮಂದಿ ಫೆ.27 ರಂದು ನಡೆದ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಇದರಲ್ಲಿ ಒಬ್ಬರು ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ.

ADVERTISEMENT

ಆಗಿದ್ದೇನು?: 2025 ಮಾರ್ಚ್ 10ರಂದು ವಿಜಯಪುರ ಪುರಸಭೆಯ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‍ನ ಏಳು ಮಂದಿ ಪುರಸಭೆ ಸದಸ್ಯರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸಿದ್ದರು. ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ, ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್ ನೀಡಲಾಗಿತ್ತು.

ಪಕ್ಷದ ಸೂಚನೆ ಮೇರೆಗೆ (ವಿಪ್) ಉಲ್ಲಂಘಿಸಿದ ಏಳು ಮಂದಿ ಜೆಡಿಎಸ್ ಸದಸ್ಯರ ವಿರುದ್ಧ ಅಂದಿನ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಅವರು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಫೆ.26ರಂದು ಈ ಪ್ರಕರಣ ಇತ್ಯರ್ಥ ಪಡಿಸಿದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ಏಳು ಮಂದಿಯನ್ನು ಅನರ್ಹರೆಂದು ತೀರ್ಪು ನೀಡಿದ್ದರು. ತೀರ್ಪು ನೀಡಿದ ದಿನದಂದೆ ಜಿಲ್ಲಾಧಿಕಾರಿ ವರ್ಗಾವಣೆಗೊಂಡಿದ್ದಾರೆ.

ಫೆ.27ರಂದು ಸಮಿತಿಗೆ ಚುನಾವಣೆ ನಡೆದಿದ್ದು, ಅನರ್ಹಗೊಂಡ ಜೆಡಿಎಸ್ ಸದಸ್ಯರೂ ಮತದಾನ ಮಾಡಿದ್ದರು. ಆದರೆ ಜಿಲ್ಲಾಧಿಕಾರಿ ತೀರ್ಪು ಚುನಾವಣಾ ಫಲಿತಾಂಶ ಹೊರ ಬಿದ್ದ ಬಳಿಕ ಬಹಿರಂಗವಾಗಿದೆ. ಈಗ ಅನರ್ಹರ ಮತದಾನದಿಂದ ಗೆದ್ದವರ ಸ್ಥಾನ ಉರ್ಜಿತವೇ? ಅಥವಾ ಕಾನೂನಿಗೆ ವಿರುದ್ಧವೇ ಎಂದು ಚರ್ಚೆ ಶುರುವಾಗಿದೆ.

ಅನರ್ಹರಾಗಿರುವ ಏಳು ಮಂದಿಯಲ್ಲಿ ಆರು ಮಂದಿ ಮಾತ್ರ ಮತದಾನ ಮಾಡಿದ್ದು, ಇದರಲ್ಲಿ ಒಬ್ಬರು ಸದಸ್ಯರಾಗಿಯೂ ಆಯ್ಕೆಗೊಂಡಿದ್ದಾರೆ. ಸಮಿತಿಗೆ ಆಯ್ಕೆಗೊಂಡಿರುವ ಎಲ್ಲ 10 ಮಂದಿ ಸದಸ್ಯರು ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳೇ ಆಗಿರುವ ಕಾರಣ ಅನರ್ಹರಿಗೆ ಮತದಾನದ ಹಕ್ಕು ನೀಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನ್ಯಾಯಾಲಯಕ್ಕೆ ಹೋಗುವ ಸಾಧ್ಯತೆ ಇದೆ.

ಕಾಂಗ್ರೆಸ್ ನ್ಯಾಯಾಲಯದ ಬಾಗಿಲು ಬಡಿಯುವುದಕ್ಕೂ ಮುನ್ನವೇ ಅನರ್ಹ ಸದಸ್ಯರು ಅನರ್ಹತೆಯ ಆದೇಶದ ವಿರುದ್ಧ ತಡೆಯಾಜ್ಞೆ ತಂದಲ್ಲಿ ಇವರ ಮತದಾನದ ಹಕ್ಕು ಉಳಿಯಲಿದೆಯೇ ಎಂಬ ವಿಶ್ಲೇಷಣೆಗಳೂ ಆರಂಭವಾಗಿವೆ.

ಅನರ್ಹಗೊಂಡ ಸದಸ್ಯರು ಜಿಲ್ಲಾಧಿಕಾರಿ ತೀರ್ಪಿನ ವಿರುದ್ಧ ತಡೆಯಾಜ್ಞೆ ತರಲು ಹೈಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ಈ ಎಲ್ಲ ಬೆಳೆವಣಿಗೆಗಳು ಯೋಜನಾ ಸಮಿತಿಯ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿದ್ದು, ಕುತೂಹಲ ಮೂಡಿಸಿದೆ.

ಫೆ.26 ರಂದು ಪುರಸಭೆ ಸದಸ್ಯತ್ವ ಅನರ್ಹರಾಗಿರುವ ಬಗ್ಗೆ ಮಾಹಿತಿ ಇರಲಿಲ್ಲ. ಫೆ.27 ರಂದು ಚುನಾವಣಾ ಫಲಿತಾಂಶ ಬಂದ ಬಳಿಕ ಆದೇಶ ಕೈಸಿಕ್ಕಿದೆ. ಪ್ರಾಮಾಣಿಕರಿಗೆ ನ್ಯಾಯ ಸಿಗಲಿದೆ.
ಎಂ.ಬೈರೇಗೌಡ ಪುರಸಭೆ ಅನರ್ಹ ಸದಸ್ಯ

ನೆಲಮಂಗಲದಲ್ಲಿ ಅನರ್ಹರಿಗಿಲ್ಲ ಅವಕಾಶ

ಇದೇ ಮಾದರಿಯಲ್ಲಿ ನೆಲಮಂಗಲದ ನಗರಸಭೆಯಲ್ಲಿನ ಏಳು ಜೆಡಿಎಸ್ ಸದಸ್ಯರು ವಿಪ್ ಉಲ್ಲಂಘನೆಯ ಆರೋಪಕ್ಕೆ ಗುರಿಯಾಗಿದ್ದರು. ಸಮಿತಿಯ ಚುನಾವಣಾ ಮತದಾನಕ್ಕೂ ಮುಂಚಿತವಾಗಿ ಫೆ.24 ರಂದು ಜಿಲ್ಲಾಧಿಕಾರಿ ನೆಲಮಂಗಲ ನಗರಸಭೆಯ ಏಳು ಮಂದಿ ಜೆಡಿಎಸ್ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿದ ಕಾರಣ ಈ ಎಲ್ಲ ಸದಸ್ಯರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿರಲಿಲ್ಲ. 

ಗೆದ್ದವರಲ್ಲಿ ಅನರ್ಹರು ಒಬ್ಬರು!

ಪಟ್ಟಣದ ಪುರಸಭೆ 1ನೇ ವಾರ್ಡ್‌ ಸದಸ್ಯ ಸಿ.ನಾರಾಯಣಸ್ವಾಮಿ ಉಪಾಧ್ಯಕ್ಷ ಹಾಗೂ 15ನೇ ವಾರ್ಡ್‌ ಸದಸ್ಯೆಯಾಗಿದ್ದ ತಾಜುನ್ನಿಸಾ ಮೆಹಬೂಬ್ ಪಾಷಾ 17ನೇ ವಾರ್ಡ್‌ ಬೈರೇಗೌಡ 19ನೇ ವಾರ್ಡ್‌ನ ರವಿ 2ನೇ ವಾರ್ಡ್‌ನ ಸದಸ್ಯೆ ರಾಜೇಶ್ವರಿ ಭಾಸ್ಕರ್ 13ನೇ ವಾರ್ಡ್‌ ಕವಿತಾ 14 ನೇ ವಾರ್ಡ್‌ನ ರಾಧಮ್ಮ ಪ್ರಕಾಶ್ ಅನರ್ಹಗೊಂಡ ಪುರಸಭೆ ಸದಸ್ಯರು. ಇವರಲ್ಲಿ ರಾಧಮ್ಮ ಪ್ರಕಾಶ್ ಮತದಾನದಲ್ಲಿ ಭಾಗವಹಿಸಿರಲಿಲ್ಲ. ಇದರಲ್ಲಿ ಸಮಿತಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬೈರೇಗೌಡ ಅವರು ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.