ADVERTISEMENT

ಡಾ.ಜಿ.ಪರಮೇಶ್ವರ್‌ ಕಡೆಗಣಿಸಿದರೆ ಪಕ್ಷಕ್ಕೆ ನಷ್ಟ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 13:03 IST
Last Updated 27 ಸೆಪ್ಟೆಂಬರ್ 2019, 13:03 IST

ದೇವನಹಳ್ಳಿ: ‘ದಲಿತ ಸಮುದಾಯದ ಕಾಂಗ್ರೆಸ್ ಪಕ್ಷದ ಶಾಸಕ ಡಾ.ಜಿ.ಪರಮೇಶ್ವರ್‌ ಅವರನ್ನು ಕಡೆಗಣಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ತುಂಬಾ ನಷ್ಟವಾಗಲಿದೆ’ ಎಂದು ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕ ಅಧ್ಯಕ್ಷ ಸಿ.ಮುನಿಯಪ್ಪ ಛಲವಾದಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಾ.ಜಿ.ಪರಮೇಶ್ವರ್‌ ಅವರು ರಾಜ್ಯ ಮಟ್ಟದ ಹಿರಿಯ ನಾಯಕರು. ಕೆಪಿಸಿಸಿ ವತಿಯಿಂದ ನಡೆಯುವ ಪ್ರಮುಖ ನಿರ್ಣಾಯಕ ಸಭೆಗಳಿಂದ ಅವರನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಸತತ ಎಂಟು ವರ್ಷಗಳ ಕಾಲ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಪಕ್ಷ ಬಲವರ್ಧನೆಗೆ ಪ್ರಾಮಾಣಿಕರಾಗಿ ಶ್ರಮಿಸಿದ್ದಾರೆ. ಒಂದು ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಯಶಸ್ವಿಯೂ ಆಗಿದ್ದಾರೆ. ಇಂತಹ ನಾಯಕನನ್ನು ನಿರ್ಲಕ್ಷ್ಯಸುವುದು ಪಕ್ಷಕ್ಕೆ ಶೋಭೆ ತರುವಂತಹ ವಿಚಾರವಲ್ಲ’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್ ಪಕ್ಷದ ಕೆಲ ಹಿರಿಯರ ನಾಯಕರ ಸ್ವಾರ್ಥ ರಾಜಕಾರಣದಿಂದ ಕಾಂಗ್ರೆಸ್ ಪಕ್ಷ ಈಗಾಗಲೇ ಹೀನಾಯ ಸ್ಥಿತಿಗೆ ತಲುಪಿದೆ. ಜಾತಿ ರಾಜಕಾರಣದಿಂದ ನಾಯಕರು ಹೊರ ಬರಬೇಕು. ಪ್ರಾಮಾಣಿಕವಾಗಿ ನಿಷ್ಠಾವಂತರಾಗಿ ಪಕ್ಷಕ್ಕೆ ದುಡಿದವರನ್ನು ಉನ್ನತ ಸ್ಥಾನಮಾನ ನೀಡಬೇಕು. ಮೂಲ ಕಾಂಗ್ರೆಸ್ ನಾಯಕರನ್ನು ನಿರ್ಲಕ್ಷ್ಯ ಮಾಡಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.