ದೊಡ್ಡಬಳ್ಳಾಪುರ: ತಾಲ್ಲೂಕಿನ ರಘುನಾಥಪುರ ಗ್ರಾಮದ ಸಮೀಪ ಕೊನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ ಸೀಗೆಹಳ್ಳಿ ಕೆರೆಗೆ ಕಾರ್ಖಾನೆಯ ತ್ಯಾಜ್ಯವನ್ನು ಟ್ರ್ಯಾಕ್ಟರ್ ಮೂಲಕ ಸುರಿಯುತ್ತಿದ್ದ ಟ್ರ್ಯಾಕ್ಟರ್ ಮತ್ತು ಚಾಲಕನನ್ನು ಹಿಡಿದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿಗೆ ಒಪ್ಪಿಸಿ ದೂರು ನೀಡಿದ್ದಾರೆ.
ಸೀಗೆಹಳ್ಳಿ ಕೆರೆಗೆ ಕಾರ್ಖಾನೆ ತ್ಯಾಜ್ಯವನ್ನು ಟ್ರ್ಯಾಕ್ಟರ್ ಮೂಲಕ ಸುರಿಯುತ್ತಿದ್ದಾಗ ಸ್ಥಳೀಯರು ಗಮನಿಸಿ, ಟ್ರ್ಯಾಕ್ಟರ್ ತಡೆದು ಗ್ರಾಮ ಪಂಚಾಯಿತಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ತ್ಯಾಜ್ಯ ಸುರಿದಿರುವ ಕಾರ್ಖಾನೆಗಳ ಮೇಲೆ ಕ್ರಮ ವಹಿಸುವಂತೆ ಒತ್ತಾಯಿಸಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೋರಾಟಗಾರ ಆರ್.ಎಂ.ಮಹಾದೇವ ದೂರಿದ್ದಾರೆ.
ತ್ಯಾಜ್ಯ ಸುರಿದಿರುವ ಪ್ರದೇಶದ ಕೊನಘಟ್ಟ ಗ್ರಾಮ ಪಂಚಾಯಿತಿಗೂ ದೂರು ನೀಡಲಾಗಿದೆ. ಇತ್ತೀಚೆಗೆ ಕಾರ್ಖಾನೆಗಳಿಂದ ಕೆರೆಗಳಿಗೆ ತ್ಯಾಜ್ಯ ತಂದು ಸುರಿಯುವುದು ಹೆಚ್ಚಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಅರೆಕಾಲಿಕ ಸ್ವಯಂಸೇವಕ ಕೃಷ್ಣಪ್ರಸಾದ್ ಆಗ್ರಹಿಸಿದ್ದಾರೆ.
ಕೆರೆ ಅಂಗಳದಲ್ಲಿ ಕಸ ಸುರಿಯುತ್ತಿರುವ ಬಗ್ಗೆ ಸ್ಥಳೀಯ ಮುಖಂಡರಾದ ಎಚ್.ಚೆನ್ನಪ್ಪ, ಮುನಿರಾಜಪ್ಪ, ಗಂಗರಾಜು, ದಾಸೇಗೌಡ, ನರಸಿಂಹಮೂರ್ತಿ ಮುಂದಾದವರು ಸಹ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.