
ದೊಡ್ಡಬಳ್ಳಾಪುರ: ಕನ್ನಡಿಗರಲ್ಲಿ ಕನ್ನಡ ಪುಸ್ತಕ ಓದುವ ಪ್ರೀತಿ ಬೆಳೆಸಲು ‘ಕನ್ನಡ ಪುಸ್ತಕ ಓದಿ - ಬಹುಮಾನ ಗೆಲ್ಲಿ’ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ ಎಂದು ವಿಜ್ಞಾನ ಲೇಖಕ ಡಾ.ಎ.ಓ.ಆವಲಮೂರ್ತಿ ಹೇಳಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ಭಾನುವಾರ ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ‘ಕನ್ನಡ ಪುಸ್ತಕ ಓದಿ-ಬಹುಮಾನ ಗೆಲ್ಲಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಎನ್ನುವ ಮೂರು ವಿಭಾಗದಲ್ಲಿ ಪರೀಕ್ಷೆ ನಡೆಯಲಿದೆ. ದೊಡ್ಡಬಳ್ಳಾಪುರದ ವಿವಿಧ ಸಂಘಟನೆಗಳ ವತಿಯಿಂದ ನಡೆಯುತ್ತಾ ಬರುತ್ತಿವೆ. ಸ್ಪರ್ಧೆಯಲ್ಲಿ ಈ ವರ್ಷ ‘ಕುವೆಂಪು’ ಅವರ ಪುಸ್ತಕ ಓದಿದ ನಂತರ ಪರೀಕ್ಷೆ ಬರೆದು ಬಹುಮಾನ ಗೆಲ್ಲ ಬಹುದಾಗಿದೆ. ನ. 23 ರಂದು ನಗರದ ಎಂಎಬಿಎಲ್ ಪ್ರೌಢ ಶಾಲೆಯಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಕನ್ನಡ ಪುಸ್ತಕ ಓದಿ-ಬಹುಮಾನ ಗೆಲ್ಲಿ ಕಾರ್ಯಕ್ರಮ ಪುಸ್ತಕ ಓದುವ ಅಭ್ಯಾಸ ಪ್ರೋತ್ಸಾಹಿಸಲು ಆಯೋಜಿಸಲಾಗಿದೆ. ಕನ್ನಡ ಪುಸ್ತಕ ಖರೀದಿಸುವುದು ಹಾಗೂ ಓದುವುದು ನಿಜವಾದ ಕನ್ನಡಾಭಿಮಾನ. ಜಗತ್ತಿನ ಜ್ಞಾನ ಅರಿಯಲು ಪುಸ್ತಕಗಳು ಸಹಕಾರಿ ಮತ್ತು ಪರಿಣಾಮಕಾರಿ ಆಗಿವೆ ಎಂದರು.
ನಿರಂತರ ಓದಿನಿಂದ ಓದುಗರಿಗೆ ಜ್ಞಾನ ವಿಸ್ತರಿಸುತ್ತದೆ. ಕನ್ನಡ ಪುಸ್ತಕ ಓದಿನ ಮೂಲಕ ಪಡೆಯುವ ಜ್ಞಾನ ಕನ್ನಡ ಕಟ್ಟುವ ಕೆಲಸಕ್ಕೂ ಸಹಕಾರಿ ಆಗಲಿದೆ. ಕನ್ನಡ ಅಭಿಮಾನ ಭಾಷಣಗಳಿಗೆ ಮಾತ್ರ ಸೀಮಿತವಾಗಬಾರದು. ಕನ್ನಡ ಪುಸ್ತಕಗಳನ್ನು ಎಷ್ಟು ಜನ ಕೊಳ್ಳುತ್ತಾರೆ. ಓದುತ್ತಾರೆ ಎಂಬುದು ಕನ್ನಡ ಭಾಷೆಯ ಸ್ಥಿತಿ ಗತಿಯನ್ನು ಅಳೆಯುವ ನಿಜವಾದ ಮಾನದಂಡಗಳಲ್ಲಿ ಒಂದಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜು, ಮೂರು ದಶಕಗಳಿಂದ ನವೆಂಬರ್ ತಿಂಗಳಲ್ಲಿ ಸಾಹಿತ್ಯ - ವಿಜ್ಞಾನ-ಸಂಸ್ಕೃತಿ ಸಮಾಗಮ ಉಪನ್ಯಾಸ ಮಾಲಿಕೆ ನಡೆಸಲಾಗುತ್ತಿದೆ. ತಾಲ್ಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆಯುವ ಈ ಕಾರ್ಯಕ್ರಮ ನ.3 ರಂದು ನಗರದ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢ ಶಾಲೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.
ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕಾರ್ಯಕಾರಿ ಸಮಿತಿ ಪರಮೇಶ್, ಜಿ.ಸಿ.ಶಿವಕುಮಾರ್, ಚಂದ್ರಣ್ಣ, ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯ ಕೆ.ಮಹಾಲಿಂಗಯ್ಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಎ.ಅಣ್ಣಯ್ಯ, ಇಸ್ತೂರು ರಂಗಸ್ವಾಮಯ್ಯ ಇದ್ದರು.
ಕನ್ನಡ ಪುಸ್ತಕ ಓದಿ-ಬಹುಮಾನ ಗೆಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಪಿಸುವವರು ಕುವೆಂಪು ಪುಸ್ತಕ ಮತ್ತು ಹೆಚ್ಚಿನ ವಿವರಗಳನ್ನು ಪಡೆಯಲು ಡಾ.ಎ.ಓ.ಆವಲಮೂರ್ತಿ 7411882304, ಡಿ.ಪಿ.ಆಂಜನೇಯ 9242993593, ವೆಂಕಟರಾಜು – 9886223228 ಇವರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.