ADVERTISEMENT

ದೊಡ್ಡಬಳ್ಳಾಪುರ: ಸಂಭ್ರಮದ ಈದ್ ಮಿಲಾದ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 2:16 IST
Last Updated 6 ಸೆಪ್ಟೆಂಬರ್ 2025, 2:16 IST
ದೊಡ್ಡಬಳ್ಳಾಪುರದಲ್ಲಿ ಶುಕ್ರವಾರ ಈದ್ ಮಿಲಾದ್ ಅಂಗವಾಗಿ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು
ದೊಡ್ಡಬಳ್ಳಾಪುರದಲ್ಲಿ ಶುಕ್ರವಾರ ಈದ್ ಮಿಲಾದ್ ಅಂಗವಾಗಿ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು   

ದೊಡ್ಡಬಳ್ಳಾಪುರ: ನಗರದಲ್ಲಿ ಶುಕ್ರವಾರ ಶ್ರದ್ಧಾ, ಭಕ್ತಿ, ಸಂಭ್ರಮದಿಂದ ‘ಈದ್ ಮಿಲಾದ್’ ಆಚರಿಸಲಾಯಿತು.

ಶಾಂತಿದೂತ, ಮಾನವತಾವಾದಿ ವಿಶ್ವ ಪ್ರವಾದಿ ಮುಹಮದ್ ಪೈಗಂಬರ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ಈದ್ ಮಿಲಾದ್ ಆಚರಣೆಯಲ್ಲಿ ಮುಸ್ಲಿಂ ಬಾಂಧವರು ಪರಸ್ಪರ ಈದ್ ಶುಭಾಶಯ ಕೋರುವ ಮೂಲಕ ಸಂಭ್ರಮಿಸಿದರು. ಮಸೀದಿಗಳಲ್ಲಿ ಮೌಲೀದ್ ಹಾಗೂ ಕುರಾನ್ ಪಾರಾಯಣ ಆಚರಣೆ ನಡೆಯಿತು.

ದೊಡ್ಡಬಳ್ಳಾಪುರದಲ್ಲಿ ಶುಕ್ರವಾರ ಈದ್ ಮಿಲಾದ್ ಅಂಗವಾಗಿ ರಸ್ತೆಗಳನ್ನು ಹಸಿರು ಬಣ್ಣದ ಬ್ಯಾನರ್ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು

ಮಸೀದಿಗಳ ಸಮೀಪದ ರಸ್ತೆಗಳಲ್ಲಿ ಹಸಿರುಮಯ ಬ್ಯಾನರ್‌, ಬಾವುಟಗಳು, ವಿದ್ಯುತ್ ದೀಪಾಲಂಕಾರಗಳು ರಾರಾಜಿಸುತ್ತಿದ್ದವು.  ಮಸೀದಿಗಳಲ್ಲಿ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ನಗರದ ಇಸ್ಲಾಂಪುರ ಜಾಮಿಯಾ ದರ್ಗಾದಿಂದ ಪೈಗಂಬರ್ ಮೆಕ್ಕಾದ ಸ್ಥಬ್ದ ಚಿತ್ರಗಳು, ಮೌಲೀದ್ ಪಾರಾಯಣದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಪ್ರಪಂಚದ ಸೃಷ್ಟಿಗೇ ಕಾರಣೀಭೂತರಾದ ಪ್ರವಾದಿ ಮುಹಮ್ಮದ್ ಮುಸ್ತಫಾ ಜನ್ಮ ದಿನವಾಗಿ ಈದ್ ಮಿಲಾದ್ ಮಹತ್ವ ಪಡೆದಿದೆ. ಅವರ ಬದುಕು, ನಡೆ-ನುಡಿಗಳು, ಜನರಲ್ಲಿ ತೋರಿದ ಕಾರುಣ್ಯ, ಸಮಾನತೆ, ಸಹೋದರತೆ, ಸಹನೆ, ಏಕತೆ, ದೈವ ಭಕ್ತಿ, ಎಲ್ಲವೂ ಅದ್ಭುತ, ಸರ್ವ ಕಾಲದಲ್ಲೂ ಅನುಕರಣೀಯ ಎಂಬ ಸಂದೇಶ ಸಾರಲಾಯಿತು.

ದೊಡ್ಡಬಳ್ಳಾಪುರದಲ್ಲಿ ಶುಕ್ರವಾರ ಈದ್ ಮಿಲಾದ್ ಅಂಗವಾಗಿ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು

ಈದ್ ಮಿಲಾದ್‍ನಂದು ಮಸೀದಿಗಳಲ್ಲಿ ವಿಶೇಷ ಪ್ರವಚನ ಏರ್ಪಡಿಸಿ ಪ್ರವಾದಿಯವರ ಬಗ್ಗೆ ಮಾಹಿತಿ ಮತ್ತು ಆಚರಿಸುವ ಬಗೆಯನ್ನೂ, ಧರ್ಮಪಾಲನೆಯ ಮಹತ್ವ ಮತ್ತು ಇದನ್ನು ಪಾಲಿಸುವ ಬಗೆಯನ್ನೂ ತಿಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.