
ದೊಡ್ಡಬಳ್ಳಾಪುರ:ತಾಲ್ಲೂಕಿನ ಮಜರಾಹೊಸಹಳ್ಳಿ, ದೊಡ್ಡತುಮಕೂರು ಗ್ರಾಮಗಳ ಕೆರೆಗಳಿಗೆ ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಕೈಗಾರಿಕೆಗಳಿಂದ ತ್ಯಾಜ್ಯ ನೀರು ಹರಿದು ಬಂದು ಕಲುಷಿತವಾಗಿರುವ ಕುರಿತು ಗ್ರಾಮಸ್ಥರಿಂದ ಸಲ್ಲಿಕೆಯಾಗಿರುವ ದೂರುಗಳ ಪರಿಶೀಲನೆಗೆ ಮಂಗಳವಾರ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದು ‘ಒಂದು ವಾರದಲ್ಲಿ ತ್ಯಾಜ್ಯ ನೀರು ಕೆರೆಗೆ ಹರಿದು ಬರುವುದು ನಿಲ್ಲದಿದ್ದರೆ ಅಧಿಕಾರಿಗಳು ಜೈಲಿಗೆ ಹೋಗಲು ಸಿದ್ದರಾಗಿರಬೇಕು’ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನ ದೊಡ್ಡತುಮಕೂರು ಕೆರೆ ವೀಕ್ಷಣೆ ಸಂದರ್ಭದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೈಗಾರಿಕೆಗಳು ತ್ಯಾಜ್ಯ ನೀರು ಶುದ್ದೀಕರಿಸದೆ ಕೆರೆಗೆ ಹರಿದು ಬಿಡುತ್ತಿರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದರಿಂದ ಸಿಟ್ಟೆಗೆದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ‘ಜಿಲ್ಲಾಧಿಕಾರಿಗಳು ವಾಸ್ತವ ಸಂಗತಿಗಳನ್ನು ಹೇಳುತ್ತಿದ್ದರೆ, ನೀನು ತಪ್ಪು ಮಾಹಿತಿ ನೀಡುವ ಮೂಲಕ ಕೈಗಾರಿಕೆಗಳವರನ್ನು ಸಮರ್ಥಿಸ ಬೇಡಿ. ಕೆರೆಗೆ ತ್ಯಾಜ್ಯ ನೀರು ಬಿಡುತ್ತಿರುವವರ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ’ ಸೂಚಿಸಿದರು.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ದೊಡ್ಡಬಳ್ಳಾಪುರ ನಗರಸಭೆ ವತಿಯಿಂದ ಒಳಚರಂಡಿ ನೀರು ಶುದ್ದೀಕರಿಸದೇ ಕೆರೆಗೆ ಹರಿದು ಬಿಡುತ್ತಿರುವ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಉಪಲೋಕಾಯುಕ್ತರ ಪ್ರಶ್ನೆಗೆ ‘ಕ್ರಿಮಿನಲ್ ಮೊಕೊದ್ದಮೆ’ ದೂರು ದಾಖಲಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು.
ಕಚೇರಿ ಏಕೆ ಬೆಂಗಳೂರಿನಲ್ಲಿದೆ ?
ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು, ಕಚೇರಿಗೆ ಅಗತ್ಯ ಇರುವ ಮನೆಯನ್ನು ದೊಡ್ಡಬಳ್ಳಾಪುರದಲ್ಲಿ ನೀಡಿದ್ದರು ಸಹ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಏಕೆ ಬೆಂಗಳೂರಿನಲ್ಲೇ ಇದೆ ಎಂದು ಪ್ರಶ್ನೆ ಮಾಡಿದ ಉಪಲೋಕಾಯುಕ್ತರಿಗೆ ಉತ್ತರ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ‘ಕಚೇರಿಗೆ ಯೋಗ್ಯವಿಲ್ಲದ ಕಟ್ಟಡ ನೀಡಿದ್ದಾರೆ’ ಎಂದು ಉತ್ತರಿಸಿದರು. ಇದಕ್ಕೆ ಗರಂ ಆದ ಉಪಲೋಕಾಯುಕ್ತರು ‘ನೀವು ಮಾತ್ರ ಸುರಕ್ಷಿತವಾಗಿರಬೇಕು, ಕೈಗಾರಿಕೆಗಳವರು ಕೆರೆಗಳಿಗೆ ತ್ಯಾಜ್ಯ ನೀರು ಹರಿದು ಬಿಟ್ಟು ಸಾರ್ವಜನಿಕರು ಏನಾದರು ಹಾಳಾಗಿ ಹೋಗಲಿ ಎನ್ನುವ ನಿಮ್ಮ ದೋರಣೆ ಸರಿ ಇಲ್ಲ. ತಕ್ಷಣ ದೊಡ್ಡಬಳ್ಳಾಪುರ ಕಚೇರಿಯಲ್ಲಿಯೇ ಕಾರ್ಯನಿರ್ವಹಿಸಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಸೂಚಿಸಿದರು.
ಅಧಿಕಾರಿಗಳ ದಂಡು:
ಉಪಲೋಕಾಯುಕ್ತರು ಮಂಗಳವಾರ ಕೆರೆಗಳ ವೀಕ್ಷಣೆಗೆ ಆಗಮಿಸಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹತ್ತಾರು ಕಾರುಗಳೊಂದಿಗೆ ಭೇಟಿ ನೀಡಿದ್ದರು. ಹಾಗೆಯೇ ನೂರಾರು ಜನ ಸ್ಥಳೀಯ ಗ್ರಾಮಗಳ ಜನರು ಇದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳ ಭೇಟಿ, ಸಭೆಗಳು ಸುಮಾರು 6 ವರ್ಷಗಳಿಂದಲು ಹತ್ತಾರು ಬಾರಿ ನಡೆದಿವೆ. ಆದರೆ ಇದುವರೆಗೂ ಕೆರೆಗೆ ಕಲುಷಿತ ನೀರು ಬರುವುದು ಮಾತ್ರ ನಿಂತಿಲ್ಲ. ಲೋಕಾಯುಕ್ತರ ಭೇಟಿಯಿಂದಲು ತ್ಯಾಜ್ಯ ನೀರು ಕೆರೆಗೆ ಹರಿದು ಬರುವುದು ನಿಲ್ಲದೇ ಇದ್ದರೆ ನಮ್ಮ ಮುಂದಿನ ಹೋರಾಟದ ರೂಪರೇಷೆಗಳನ್ನು ಬದಲಾಯಿಸಿಕೊಳ್ಳಬೇಕಾಗಲಿದೆ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಹೋರಾಟ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಸಿಇಒ ಡಾ.ಕೆ.ಎನ್.ಅನುರಾಧ, ತಹಶೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ, ಇಇಒ ಮಂಜುನಾಥ ಹರ್ತಿ, ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್,ಸ್ಥಳೀಯ ಗ್ರಾಮಗಳ ಮುಖಂಡರು ಹಾಗೂ ಅರ್ಕಾವತಿ ಹೋರಾಟ ಸಮಿತಿ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.