ದೊಡ್ಡಬಳ್ಳಾಪುರ: ಇಲ್ಲಿನ ಚಿಂತನ ಮಂಥನ ಸಮಿತಿ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ‘ಸೌಹಾರ್ದತೆ ಮತ್ತು ಸಾಮರಸ್ಯದ ಸಮಾಜ ರಚನೆಯಲ್ಲಿ ಯುವ ವಿದ್ಯಾರ್ಥಿಗಳ ಪಾತ್ರ’ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಿಂದ ಮೈತ್ರಿ ಪ್ರಥಮ, ಎಂ.ಇಂಚನ ದ್ವಿತೀಯ, ಮಾಣಿಕ್ಯ ತೃತೀಯ ಬಹುಮಾನ ಪಡೆದರು.
ಮಹಿಳಾ ವೈದ್ಯೆ ಡಾ.ಇಂದಿರ ಶ್ಯಾಮ್‌ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಮಾಡಿಕೊಳ್ಳದೆ ಅರ್ಥಪೂರ್ಣ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಂತಹ ಹಾಗೂ ದೇಶದ ಸಮಗ್ರ ಏಳಿಗೆಯ ದೃಷ್ಠಿಯಿಂದ ಇಂತಹ ಸ್ಪರ್ಧೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಿದೆ. ಇದಕ್ಕೆ ಶಿಕ್ಷಕರ ಹಾಗೂ ಪೋಷಕರ ಪ್ರೋತ್ಸಾಹವು ಮುಖ್ಯವಾಗಿದೆ ಎಂದರು.
ಜನಪರ ಹೋರಾಟಗಾರ ಪಿ.ಎ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಬಾರದು. ಪಠ್ಯೇತರ ವಿಷಯವನ್ನು ಸಹ ಹೆಚ್ಚು ಅಧ್ಯಯನ ಮಾಡಬೇಕು. ಧರ್ಮ ಮನುಷ್ಯರನ್ನು ಸೃಷ್ಟಿ ಮಾಡಿಲ್ಲ, ಮನುಷ್ಯನೇ ಧರ್ಮವನ್ನು ಸೃಷ್ಟಿ ಮಾಡಿದ್ದಾನೆ ಎನ್ನುವ ಸತ್ಯದ ಅರಿವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.
ಮಾನಸಿಕ ರೋಗಗಳ ಬಗ್ಗೆ ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ ಡಾ.ಶ್ರೀನಿವಾಸ್, ಚಿಂತನ ಮಂಥನ ಸಮಿತಿ ಸಂಚಾಲಕ ನಟರಾಜು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.