ADVERTISEMENT

ದೊಡ್ಡಬಳ್ಳಾಪುರ | ಬಾರದ ಮಳೆ: ಬಾಡಿದ ರಾಗಿ ಬೆಳೆ

ದೊಡ್ಡಬಳ್ಳಾಪುರ: ಬರ ಘೋಷಣೆಗೆ ರೈತ ಆಗ್ರಹ

ನಟರಾಜ ನಾಗಸಂದ್ರ
Published 18 ಆಗಸ್ಟ್ 2023, 4:07 IST
Last Updated 18 ಆಗಸ್ಟ್ 2023, 4:07 IST
ರಾಗಿ ಬೆಳೆ (ಪ್ರಾತಿನಿಧಿಕ ಚಿತ್ರ)
ರಾಗಿ ಬೆಳೆ (ಪ್ರಾತಿನಿಧಿಕ ಚಿತ್ರ)   

ದೊಡ್ಡಬಳ್ಳಾಪುರ: ತಾಲ್ಲೂಕಿನ ಮಳೆ ಆಶ್ರಯದಲ್ಲಿ ಬಿತ್ತನೆಯಾಗಿ ಪೈರಾಗಿರುವ ರಾಗಿ, ಮುಸುಕಿನ ಜೋಳ, ಅವರೆ, ತೊಗರಿ ಸೇರಿದಂತೆ ಎಲ್ಲಾ ಬೆಳೆಗಳು ಮಳೆ ಇಲ್ಲದೆ ಒಣಗುತ್ತಿದೆ. ಆಗಸ್ಟ್‌ 3ನೇ ವಾರ ಪ್ರಾರಂಭವಾದರೂ ಮಳೆ ಇಲ್ಲದೆ ಇನ್ನೂ ಶೇ 25ರಷ್ಟು ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡದೇ ರೈತರು ಕಂಗಾಲಾಗಿದ್ದಾರೆ.

ಮೇ ತಿಂಗಳಿಂದ ಆಗಸ್ಟ್‌ ಎರಡನೇ ವಾರದ ಅಂತ್ಯದವರೆಗೆ ವಾಡಿಕೆ 393 ಮಿ.ಮೀ ಆಗಬೇಕಿತ್ತು. ಆದರೆ 350.5 ಮಿ.ಮೀ ಮಳೆಯಾಗಿದೆ. ಅದೂ ಸಹ ಜೂನ್‌– ಜುಲೈ ತಿಂಗಳಲ್ಲಿ 10 ರಿಂದ 14 ದಿನಗಳ ಕಾಲ ಮಳೆಯಾಗಿದೆ. ಇದರ ಹೊರತು ಉಳಿದಂತೆ ಬಿತ್ತನೆಗೆ ಹದ ಮಳೆ ಬಿದ್ದಿಲ್ಲ. ಹೀಗಾಗಿಯೇ ಸೂಕ್ತ ಸಮಯಕ್ಕೆ ರಾಗಿ, ಮುಸುಕಿನಜೋಳ ಬಿತ್ತನೆ ಮಾಡಲು ಹಿನ್ನಡೆಯಾಗಿದೆ ಎನ್ನುತ್ತಾರೆ ರೈತರು.

ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ 16,122 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತೆಯಾಗುವ ಗುರಿ ಹೊಂದಲಾಗಿತ್ತು. ಆದರೆ ಈಗ ಬಿತ್ತೆಯಾಗಿರುವುದು 8,809 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ. ಹಾಗೆಯೇ ಮುಸುಕಿನಜೋಳ 6,700 ಗುರಿ, ಬಿತ್ತೆಯಾಗಿರುವುದು 3,229 ಹೆಕ್ಟೇರ್‌ ಪ್ರದೇಶ. ತೊಗರಿ 360 ಹೆಕ್ಟೇರ್‌ ಗುರಿ, ಬಿತ್ತನೆಯಾಗಿರುವುದು 227 ಹೆಕ್ಟೇರ್‌ ಪ್ರದೇಶ ಮಾತ್ರ.

ADVERTISEMENT

ಮಳೆ ಬಿದ್ದರೂ, ಕೆರೆಗೆ ಬಾರದ ನೀರು: ಈ ಬಾರಿಯ ಮುಂಗಾರಿನಲ್ಲಿ ತೂಬಗೆರೆ ಹೋಬಳಿಯಲ್ಲಿ 313.7 ಮಿ.ಮೀ., ಸಾಸಲು ಹೋಬಳಿಯಲ್ಲಿ 317.9 ಮಿ.ಮೀ., ಮಧುರೆ ಹೋಬಳಿಯಲ್ಲಿ 400.4 ಮಿ.ಮೀ ಮಳೆಯಾಗುವ ಮೂಲಕ ತಾಲ್ಲೂಕಿನಲ್ಲೇ ಹೆಚ್ಚು ಮಳೆಯಾಗಿರುವ ಹೋಬಳಿಯಾಗಿದೆ. ಉಳಿದಂತೆ ಕಸಬಾ ಹೋಬಳಿ 354 ಮಿ.ಮೀ, ದೊಡ್ಡಬೆಳವಂಗಲ ಹೋಬಳಿ 383.9 ಮಿ.ಮೀ ಮಳೆಯಾಗಿದೆ. ಇಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರು ಸಹ ಮಧುರೆ ಹೋಬಳಿಯ ಕನಸವಾಡಿ ಕೆರೆಗೆ ಒಂದಿಷ್ಟು ನೀರು ಬಂದಿವೆ ಹೊರತು ತಾಲ್ಲೂಕಿನ ಯಾವುದೇ ಕೆರೆಗಳಿಗು ಈ ಬಾರಿಯ ಮಳೆಗಾಲದಲ್ಲಿ ನೀರು ಹರಿದು ಬಂದಿಲ್ಲ.

ಬರ ಘೋಷಣೆಗೆ ಆಗ್ರಹ: ಮಳೆ ಆಶ್ರಯದಲ್ಲಿ ಬಿತ್ತನೆಯಾಗಿರುವ ಬೆಳೆ ಒಣಗುತ್ತಿದೆ. ಹಾಗೆಯೇ ಮಳೆಯ ಕೊರತೆಯಿಂದಾಗಿ ಬಿತ್ತನೆಯು ಸರಿಯಾಗಿ ಆಗಿಲ್ಲ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಈ ಎಲ್ಲಾ ಕಾರಣಗಳಿಂದ ಸರ್ಕಾರ ಬರ ಘೋಷಣೆ ಮಾಡಬೇಕು. ಮೊಡಬಿತ್ತನೆ ಮೂಲಕ ಮಳೆಗೆ ಪ್ರಯತ್ನಗಳನ್ನು ತುರ್ತಾಗಿ ಪ್ರಾರಂಭಿಸಬೇಕು ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್‌ ಆಗ್ರಹಿಸಿದ್ದಾರೆ.

****

ಅಂಕಿ- ಅಂಶ

ಮೇ-ಆಗಸ್ಟ್‌ 2ನೇ ವಾರಕ್ಕೆ ಬೀಳಬೇಕಿದ್ದ ವಾಡಿಕೆ ಮಳೆ ಪ್ರಮಾಣ 393 ಮಿ.ಮೀ

ಮೇ-ಆಗಸ್ಟ್‌ 2ನೇ ವಾರಕ್ಕೆ ಬಿದ್ದಿರುವ ಮಳೆ ಪ್ರಮಾಣ 350.5 ಮಿ.ಮೀ

***

ರಾಗಿ ಬಿತ್ತನೆ ಗುರಿ 16,122 ಹೆಕ್ಟೇರ್‌

ರಾಗಿ ಬಿತ್ತನೆಯಾಗಿರುವ ಪ್ರದೇಶ 8,809 ಹೆಕ್ಟೇರ್‌

ಮುಸುಕಿನಜೋಳ ಗುರಿ 6,700 ಹೆಕ್ಟೇರ್‌

ಮುಸುಕಿನಜೋಳ ಬಿತ್ತೆಯಾಗಿರುವ ಪ್ರದೇಶ 3,229 ಹೆಕ್ಟೇರ್‌

ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಗಂಟಿಗಾನಹಳ್ಳಿಯಲ್ಲಿ ಮಳೆ ಇಲ್ಲದೆ ಒಣಗುತ್ತಿರುವ ರಾಗಿ ಪೈರು

ಮಳೆ ಬಿದ್ದರೂ, ಕೆರೆಗೆ ಬಾರದ ನೀರು ಬೆಳೆ ವಿಮೆಗೆ ಮುಗಿಬಿದ್ದ ರೈತರು ನಂದಿನಿ ಕೇಂದ್ರಗಳಲ್ಲಿ ಮತ್ತೆ ಹಾಲಿನ ಕೊರತೆ

ಬೆಳೆ ವಿಮೆಗೆ ಮುಗಿಬಿದ್ದ ರೈತರು

ರಾಗಿ ಮತ್ತು ಮುಸುಕಿನಜೋಳದ ಬೆಳೆಗೆ ಪ್ರಧಾನ ಮಂತ್ರಿ ಪಸಲ್‌ ಬಿಮಾ ಯೋಜನೆಯಲ್ಲಿ ವಿಮೆ ಮಾಡಿಸುವಂತೆ ಕೃಷಿ ಇಲಾಖೆ ಸಾಕಷ್ಟು ಪ್ರಚಾರವನ್ನು ಜೂನ್‌ ತಿಂಗಳಿಂದಲೇ ಕೈಗೊಂಡಿತ್ತು. ಮಳೆ ಹಿನ್ನಡೆಯಾದ ಕಾರಣದಿಂದ ಎರಡು ಬಾರಿ ವಿಮಾ ನೋಂದಣಿಗೆ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ರೈತರ ಮೊಬೈಲ್‌ಗಳಿಗೆ ಸಾಮೂಹಿಕ ಕರೆ ಮಾಡುವ ಮೂಲಕ ಬೆಳೆ ವಿಮಾ ನೋಂದಣಿಯ ಅಗತ್ಯತೆ ಕುರಿತಂತೆ ಅರಿವು ನೋಂದಣಿ ಕುರಿತಂತೆ ರೈತರಲ್ಲಿ ಇದ್ದ ಗೊಂದಲಗಳನ್ನು ನಿವಾರಣೆ ಮಾಡಲಾಗಿತ್ತು. ಇಷ್ಟಾದರೂ ಸಹ ಬೆಳೆ ವಿಮೆ ನೋಂದಣಿಗೆ ರೈತರು ಅಷ್ಟಾಗಿ ಆಸಕ್ತಿ ತೋರಿಸಿರಲಿಲ್ಲ. ಆದರೆ ರಾಗಿ ಮುಸುಕಿನಜೋಳ ಬಿತ್ತನೆಯಾಗಿ ಮಳೆ ಇಲ್ಲದೆ ಒಣಗಲು ಪ್ರಾರಂಭವಾದಾಗಿನಿಂದ ಬೆಳೆ ವಿಮೆ ನೋಂದಣಿಗೆ ಸಿ.ಎಸ್‌.ಕೆ ಕೇಂದ್ರಗಳಲ್ಲಿ ರೈತರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಮೂರು ದಿನಗಳಿಂದ ಈಚೆಗೆ ಐದು ಸಾವಿರ ಅರ್ಜಿಗಳು ಬೆಳೆ ವಿಮೆಗೆ ನೋಂದಣಿಯಾಗಿವೆ. ಒಟ್ಟಾರೆ ಇಲ್ಲಿಯವರೆಗೆ 10 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಪಸಲ್‌ ಬೀಮಾ ಬೆಳೆ ವಿಮೆ ನೋಂದಣಿಗೆ ಒಂದು ಹೆಕ್ಟೇರ್‌ಗೆ ₹860ಗಳನ್ನು ರೈತರು ಪಾವತಿಸಬೇಕು. ಶೇ 100ರಷ್ಟು ಬೆಳೆ ನಷ್ಟವಾದರೆ ಒಂದು ಹೆಕ್ಟೇರ್‌ಗೆ ₹42500 ಪರಿಹಾರ ರೈತರಿಗೆ ದೊರೆಯಲಿದೆ. ಇದಲ್ಲದೆ ಮಳೆ ಹೆಚ್ಚಾಗಿ ಕೊಯ್ಲಿನ ಸಮಯ ಸೇರಿದಂತೆ ವಿವಿಧ ಹಂತಗಳಲ್ಲೂ ಬೆಳೆ ನಷ್ಟವಾದರೆ ಶೇಕಡವಾರು ಲೆಕ್ಕದಲ್ಲೂ ಬೆಳೆ ಪರಿಹಾರವನ್ನು ರೈತರು ಪಡೆಯಬಹುದಾಗಿದೆ.

ಹಾಲಿನ ಸರಬರಾಜು ಕುಸಿತ

ಮಳೆಯಾಗದೆ ಇರುವುದರಿಂದ ಹಸಿರು ಮೇವಿನ ಕೊರತೆ ಉಂಟಾಗಿದೆ. ಹೀಗಾಗಿ ಹಾಲಿನ ಉತ್ಪಾದನೆ ಕುಸಿತವಾಗಿದೆ. ನಂದಿನಿ ಹಾಲಿನ ಕೇಂದ್ರಗಳಲ್ಲಿ ಮೊಸರು ಬೆಣ್ಣೆ ಹಾಗೂ ಹಾಲು ಸಹ ಸರಿಯಾಗಿ ದೊರೆಯದಾಗಿದೆ ಎಂದು ನಂದಿನಿ ಹಾಲು ಮಾರಾಟಗಾರ ಮಂಜುನಾಥ್‌ ತಿಳಿಸಿದ್ದಾರೆ. ಬೆಣ್ಣೆ ಸರಬರಾಜು ಸ್ಥಗಿತ ‘ನಮ್ಮ ಹಾಲಿನ ಬೂತ್‌ನಲ್ಲಿ ಪ್ರತಿ ದಿನ 25 ಕ್ರೇಟ್‌ ಹಾಲು ಮಾರಾಟವಾಗುತಿತ್ತು. ಆದರೆ ನಮಗೆ ಈಗ ಸರಬರಾಜು ಮಾಡುತ್ತಿರುವುದು 10 ರಿಂದ ಹೆಚ್ಚೆಂದರೆ 15 ಕ್ರೇಟ್‌ ಮಾತ್ರ. ಇನ್ನೂ ನಂದಿನಿ ಬೆಣ್ಣೆ ಸರಬರಾಜು ನಿಂತು ಹೋಗಿ ಐದು ತಿಂಗಳು ಕಳೆದಿದೆ. ನಂದಿನಿ ತುಪ್ಪವು ಸಹ 10 ಕೆ.ಜಿಗೆ ಬೇಡಿಕೆ ಸಲ್ಲಿಸಿದರೆ 4 ರಿಂದ 6 ಕೆ.ಜಿ ಸರಬರಾಜು ಮಾಡುತ್ತಿದ್ದಾರೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.