ADVERTISEMENT

‘ದಾರಿ’ ತಪ್ಪಿದ ಸಮೀಕ್ಷೆ | ಅರಣ್ಯ, ಕೆರೆ ಅಂಗಳಕ್ಕೆ ಕರೆದೊಯ್ದ ಮ್ಯಾಪ್‌

ನಟರಾಜ ನಾಗಸಂದ್ರ
Published 6 ಅಕ್ಟೋಬರ್ 2025, 7:06 IST
Last Updated 6 ಅಕ್ಟೋಬರ್ 2025, 7:06 IST
<div class="paragraphs"><p>ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸಮೀಕ್ಷೆದಾರರಿಗೆ ಮನೆಗಳು ಇರುವ ಸ್ಥಳವೆಂದು ರಾಷ್ಟ್ರೀಯ ಹೆದ್ದಾರಿ ತೋರಿಸುತ್ತಿರುವ ಪುತ್ರ ರೂಟ್‌ ಮ್ಯಾಪ್‌</p></div>

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸಮೀಕ್ಷೆದಾರರಿಗೆ ಮನೆಗಳು ಇರುವ ಸ್ಥಳವೆಂದು ರಾಷ್ಟ್ರೀಯ ಹೆದ್ದಾರಿ ತೋರಿಸುತ್ತಿರುವ ಪುತ್ರ ರೂಟ್‌ ಮ್ಯಾಪ್‌

   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆದಾರರಿಗೆ ನಿಗದಿಯಾಗಿರುವ ಮನೆಗಳ ಬಳಿಗೆ ಹೋಗಿ ಸಮೀಕ್ಷೆ ನಡೆಸಲು ಅನುಕೂಲವಾಗುವಂತೆ ರಾಜ್ಯ ಹಿಂದುಳಿದ ಆಯೋಗವು ‘ಪ್ರುತ’ ರೂಟ್‌ ಮ್ಯಾಪ್‌ ಲಿಂಕ್‌ ನೀಡಿದೆ. ಆದರೆ ಸಮೀಕ್ಷೆದಾರರು ಈ ರೂಟ್‌ ಮ್ಯಾಪ್‌ ಅನುಸರಿಸಿ ಹೋದರೆ ರಾಷ್ಟ್ರೀಯ ಹೆದ್ದಾರಿ, ಕೆರೆ ಅಂಗಳ, ಗ್ರಾಮದ ಸಮೀಪದ ಅರಣ್ಯ ಪ್ರದೇಶಕ್ಕೆ ಕರೆದೊಯ್ಯುತ್ತಿದೆ.

ಇದರಿಂದ ದಾರಿತಪ್ಪಿದ ಸಮೀಕ್ಷೆದಾರರು ವಿನಾಕಾರಣ ಸಮಯ ವ್ಯರ್ಥ ಮಾಡಿಕೊಂಡು ಗ್ರಾಮದಲ್ಲಿ ತಿರುಗಾಡುವಂತಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಸಮೀಕ್ಷೆಗೆ ನಿಯೋಜಿತವಾಗಿರುವ ಶಿಕ್ಷಕರೊಬ್ಬರು ತಾವು ದಾರಿತಪ್ಪಿರುವ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಶಿಕ್ಷಕರು ಕೆಲಸ ನಿರ್ವಹಿಸುವ ಶಾಲೆ ಇರುವ ಗ್ರಾಮವನ್ನೇ ಸಮೀಕ್ಷೆಗೆ ನೀಡಿದ್ದರೆ ಇಡೀ ಗ್ರಾಮದ ಮನೆಗಳ ಪರಿಚಯ ಇರುತಿತ್ತು. ಇದರಿಂದ ಸಮೀಕ್ಷೆ ಸುಲಭವಾಗುತಿತ್ತು. ಅಥವಾ ತಾವು ಕೆಲಸ ಮಾಡುವ ಶಾಲೆಯಿಂದ ಕನಿಷ್ಠ 3 ಕಿ.ಮೀ ವ್ಯಾಪ್ತಿಯಲ್ಲಿ ನೀಡಿದ್ದರು ಸಹ ಸಮೀಕ್ಷೆಯನ್ನು ಶೀಘ್ರವಾಗಿ ಮುಗಿಸಲು ಸಹಕಾರಿಯಾಗುತಿತ್ತು.

ಆದರೆ ಪರಿಚಯವೇ ಇಲ್ಲದೆ ದೂರದ ಊರುಗಳಲ್ಲಿ ಸಮೀಕ್ಷೆ ನಡೆಸಲು ಹೋದಾಗ ಹಲವು ತೊಂದರೆಗಳು ಎದುರಾಗುತ್ತಿವೆ. ಅದರಲ್ಲೂ ಮಹಿಳಾ ಶಿಕ್ಷಕಿಯರಂತು ಗುರುತು ಪರಿಚಯ ಇಲ್ಲದ ಊರುಗಳಿಗೆ ಹೋಗಿ ಬರಲು ತಮ್ಮ ಮಕ್ಕಳು, ಪತಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವಂತಾಗಿದೆ ಎಂದು ಮಹಿಳಾ ಶಿಕ್ಷಕಿಯೊಬ್ಬರು ತಮ್ಮ ಅಳಲು
ತೋಡಿಕೊಂಡರು.

ಮಳೆಗಾಲವಾಗಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ರೈತರು ತೋಟ, ಹೊಲಗಳಲ್ಲಿ ಕೆಲಸಕ್ಕೆ ಹೋಗಿರುತ್ತಾರೆ. ಪ್ರತಿ ಮನೆಗೂ ಕನಿಷ್ಠ ಎರಡು ಮೂರು ಬಾರಿಯಾದರು ಹೋಗಿ ಬರಬೇಕಿದೆ. ಅದರಲ್ಲೂ ಮನೆಯ ಮುಖ್ಯಸ್ಥರು ಗಂಟೆಗಟ್ಟಲೆ ಕುಳಿತು ಮಾಹಿತಿ ನೀಡಲು ಸಮಯ ಇಲ್ಲದೆ ಮತ್ತೊಂದು ದಿನ ಬರುವಂತೆ ಹೇಳುತ್ತಿದ್ದಾರೆ ಎನ್ನುತ್ತಾರೆ ಸಮೀಕ್ಷೆದಾರರೊಬ್ಬರು.

ಆಧಾರ್‌ ಫಜೀತಿ

ಪಡಿತರ ಚೀಟಿ ಹೊಂದಿರುವ ಕುಟುಂಬದ ಯಾರಾದರು ಒಬ್ಬರ ಹೆಸರು ಹೇಳುತ್ತಿದ್ದಂತೆ ಇಡೀ ಕುಟುಂಬದ ವಿವರಗಳು ಸುಲಭವಾಗಿ ಸಮೀಕ್ಷೆಯ ಆ್ಯಪ್‌ನಲ್ಲಿ ಬರುತ್ತವೆ. ಆದರೆ ಪಡಿತರ ಚೀಟಿ ಹೊಂದಿರದ ಕುಟುಂಬದ ಪ್ರತಿಯೊಬ್ಬರ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ನಮೋದಿಸಿ ಓಟಿಪಿ ಬಂದ ನಂತರವೇ ವಿವಿರಗಳನ್ನು ದಾಖಲಿಸಬೇಕು. ಸಾಕಷ್ಟು ಜನರು ಆಧಾರ್‌ ಕಾರ್ಡ್‌ ಇಕೆವೈಸಿ ಮಾಡಿಸಿಲ್ಲ. ಇದರಿಂದಾಗಿಯೂ ಸಮೀಕ್ಷೆ ವಿಳಂಬವಾಗುತ್ತಿದೆ ಎನ್ನುವುದು ಸಮೀಕ್ಷೆದಾರರ ಅಭಿಪ್ರಾಯ.

ಮಾಹಿತಿ ನೀಡಲು ನಿರಾಕರಣೆ

ಹಲವು ಕಡೆ ಸಮೀಕ್ಷೆದಾರರಿಗೆ ಮಾಹಿತಿ ನೀಡಲು ಜನ ನಿರಾಕರಿಸುತ್ತಿದ್ದಾರೆ. ನೈಜ ಮಾಹಿತಿ ನೀಡದಿರೆ ಎಲ್ಲಿ ತಮಗೆ ಸಿಗುವ ಸರ್ಕಾರಿ ಸೌಲಭ್ಯ ಕೈ ತಪ್ಪುತ್ತದೆ ಎಂಬ ಆತಂಕದಿಂದ ಸಮೀಕ್ಷೆಯಿಂದ ದೂರ ಉಳಿಯುತ್ತಿದ್ದಾರೆ. ಮಾಹಿತಿ ನೀಡುವುದು ಇರಲಿ ಸಮೀಕ್ಷೆದಾರರೊಂದಿಗೆ ಕೆಲವರು ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲ. ಸಮೀಕ್ಷೆದಾರರಿಗೆ ಮಾಹಿತಿಯನ್ನೂ ನೀಡುತ್ತಿಲ್ಲ.  ‘ಮಾಹಿತಿ ನೀಡುಲು ನಿರಾಕರಣೆ ಸ್ವಯಂ ದೃಢೀಕರಣ ಪತ್ರ’ಕ್ಕೆ ಸಹಿ ಹಾಕಲು ಹಿಂಜರಿಯುತ್ತಾರೆ. 

ಜಿಲ್ಲೆಯಲ್ಲಿ ಅ.10ರವರೆಗೆ ಶೇ.64 ರಷ್ಟು ಸಮೀಕ್ಷೆ ನಡೆದಿದೆ. ವಸತಿ ಮನೆಗಳ ಹೊರತಾದ ವಾಣಿಜ್ಯ ಮಳಿಗೆ, ಪಿಜಿ, ಹಾಸ್ಟೆಲ್‌ಗಳ ಸಂಖ್ಯೆಯನ್ನು ಸಮೀಕ್ಷೆಯ ಆನ್‌ಲೈನ್ ಆಪ್ ನಿಂದ ತೆಗೆಯಲು ಅವಕಾಶ ನೀಡಲಾಗಿದೆ. ಪ್ರುತ ರೂಟ್ ಮ್ಯಾಪ್ ಬದಲಿಗೆ ಸಮೀಕ್ಷೆದಾರರಿಗೆ ನೀಡಲಾಗಿರುವ ಬ್ಲಾಕ್‌ನಲ್ಲಿ ಇರುವ ಎಲ್ಲಾ ವಸತಿ ಮನೆಗಳನ್ನು ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಸಮೀಕ್ಷೆ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು.
-ಎ.ಬಿ.ಬಸವರಾಜು, ಜಿಲ್ಲಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.