ADVERTISEMENT

ದೊಡ್ಡಬಳ್ಳಾಪುರ: ವಕೀಲರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 15:45 IST
Last Updated 21 ಏಪ್ರಿಲ್ 2025, 15:45 IST
ಹಿರಿಯ ವಕೀಲ ಸದಾಶಿವರೆಡ್ಡಿ ಅವರ ಮೇಲಿನ ಹಲ್ಲೆ ಖಂಡಿಸಿ ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಸೋಮವಾರ ನ್ಯಾಯಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು
ಹಿರಿಯ ವಕೀಲ ಸದಾಶಿವರೆಡ್ಡಿ ಅವರ ಮೇಲಿನ ಹಲ್ಲೆ ಖಂಡಿಸಿ ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಸೋಮವಾರ ನ್ಯಾಯಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು   

ದೊಡ್ಡಬಳ್ಳಾಪುರ: ರಾಜ್ಯದ ಹಿರಿಯ ವಕೀಲ ಸದಾಶಿವರೆಡ್ಡಿ ಅವರ ಮೇಲಿನ ಹಲ್ಲೆ ಖಂಡಿಸಿ ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಸೋಮವಾರ ಕಲಾಪದಿಂದ ಹೊರಗುಳಿದು, ನ್ಯಾಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

ಬಳಿಕ ವಕೀಲರಿಗೆ ಸೂಕ್ತ ಭದ್ರತೆ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಏಪ್ರಿಲ್‌ 16ರಂದು ಭಾರತೀಯ ವಕೀಲ ಪರಿಷತ್ತಿನ ಸಹ ಅಧ್ಯಕ್ಷ, ಕರ್ನಾಟಕ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಸದಾಶಿವರೆಡ್ಡಿ ಅವರ ಕಚೇರಿಗೆ ನುಗ್ಗಿ ದುಷ್ಕರ್ಮಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಅವರಿಗೆ ತೀವ್ರ ಗಾಯವಾಗಿದೆ. ಇಂತಹ ಆತಂಕಕಾರಿ ಬೆಳವಣಿಗೆ ಇದು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಅಪನಂಬಿಕೆ ಬಿಂಬಿಸುತ್ತದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ, ಕಾರ್ಯದರ್ಶಿ ಎ.ಕೃಷ್ಣಮೂರ್ತಿ ಹೇಳಿದರು.

ADVERTISEMENT

ಈ ಬೆಳವಣಿಗೆಯಿಂದ ವೃತ್ತಿಪರ ವಕೀಲರು ಪಾರದರ್ಶಕ ಮತ್ತು ನಿರ್ಭಯವಾಗಿ ಕಾರ್ಯ ನಿರ್ವಹಿಸುವುದು ಕಷ್ಟಯವಾಗಿದೆ. ಸಾಮಾನ್ಯ ಜನರ ಪರವಾಗಿ ಸಂವಿಧಾನ ಬದ್ಧವಾಗಿ ವಾದ ಮಂಡಿಸುವ ವಕೀಲರಿಗೂ ಕೂಡ ಇರುತ್ತದೆ. ಈ ರೀತಿಯ ಅಮಾನವೀಯ ಕೃತ್ಯಗಳಿಂದ ಕುಟುಂಬದ ಸದಸ್ಯರು ಆಂತಕ ಮತ್ತು ಭಯದ ವಾತಾವರಣದಿಂದ ದಿನ ಕಳೆಯುವಂತಾಗಿದೆ ಎಂದರು.

ವಕೀಲರ ಮೇಲಿನ ಹಲ್ಲೆಗೆ ಕಡಿವಾಣ ಹಾಕಲು ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕು. ವಕೀಲರ ರಕ್ಷಣೆ ಸ್ಥಳೀಯ ಆಡಳಿತ ಅಧಿಕಾರಿಗಳು ಹಾಗೂ ವ್ಯವಸ್ಥೆಯ ಹೊಣೆಗಾರಿಕೆ. ಹಿರಿಯ ವಕೀಲ ಸದಾಶಿವರೆಡ್ಡಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ವಕೀಲರ ಸಂಘದ ಜಂಟಿ ಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ಎಂ.ಮುನಿರಾಜು, ಹಿರಿಯ ವಕೀಲರಾದ ಸೈಯದ್ ನಿಸಾರ್ ಉಲ್ಲಾ, ರೇಣುಕಾರಾಧ್ಯ, ಬೈರೇಗೌಡ, ಅಸಾದುಲ್ಲಾ ಖಾನ್, ಬಿ.ಎಸ್.ಕೃಷ್ಣಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.