ನೆಲಮಂಗಲ: ಪ್ರೀತಿಸಿ ಮದುವೆಯಾಗಿದ್ದ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಬೆಂಗಳೂರು ಉತ್ತರ ತಾಲ್ಲೂಕು ಅಂಚೆಪಾಳ್ಯದಲ್ಲಿ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
ಸ್ಪಂದನಾ (24) ಮೃತಪಟ್ಟವರು. ಪೋಷಕರ ವಿರೋಧದ ನಡುವೆ ಅಭಿಷೇಕ್‌ರೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಬಳಿಕ ವರದಕ್ಷಿಣೆಗಾಗಿ ಅಭಿಷೇಕ್ ಕಿರುಕುಳ ನೀಡುತ್ತಿದ್ದ. ಇದು ಗೊತ್ತಾಗಿ ಸ್ಪಂದನಾರ ತಂದೆ ಚಂದ್ರ ಅವರು ಇಬ್ಬರಲ್ಲಿ ರಾಜಿ ಮಾಡಿ ₹ 5 ಲಕ್ಷ ಹಣ ನೀಡಿದ್ದರು.
ಗುರುವಾರ ಭೀಮನ ಅಮಾವಾಸ್ಯೆ ಇದ್ದ ಕಾರಣ ಪತಿಯ ಪಾದಪೂಜೆಯನ್ನು ಸ್ಪಂದನಾ ಮಾಡಿದ್ದರು. ಗುರುವಾರ ರಾತ್ರಿ ತಂದೆಗೆ ಸ್ಪಂದನಾ ಕರೆ ಮಾಡಿದ್ದು, ಕಿರುಕುಳದ ಬಗ್ಗೆ ತಿಳಿಸಿ ಕಣ್ಣೀರಿಟ್ಟಿದ್ದರು. ಇದಾಗಿ ಸ್ವಲ್ಪ ಸಮಯದ ನಂತರ ಸಾವಿನ ಸುದ್ದಿಯನ್ನು ಅಭಿಷೇಕ್ ಮನೆಯವರು ಸ್ಪಂದನಾ ತಂದೆಗೆ ತಿಳಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಪಂದನಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮಾದನಾಯಕನಹಳ್ಳಿ ಪೊಲೀಸರು ವರದಕ್ಷಿಣೆ ಕಿರುಕುಳದಿಂದ ಸಾವು ಪ್ರಕರಣ ದಾಖಲಿಸಿ ಕೊಂಡಿದ್ದು, ಅಭಿಷೇಕ್‌ನನ್ನು ಬಂಧಿಸಿರುವುದಾಗಿ ಹೇಳಿದ್ದಾರೆ. ಅತ್ತೆ ಬೇಬಿ ಮಾಲಮ್ಮ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.