ADVERTISEMENT

ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ

ಆ. 31ರವರೆಗೆ ಅಭಿಯಾನ l ಕೋವಿಡ್‌ನಿಂದ ಗುಣಮುಖರಾದವರ ಪರೀಕ್ಷೆ l 2 ಪಿಎಚ್‌ಸಿ ಮೇಲ್ದರ್ಜೆಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 3:48 IST
Last Updated 19 ಆಗಸ್ಟ್ 2021, 3:48 IST
ಸೂಲಿಬೆಲೆಯ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ನಡೆದ ಕ್ಷಯರೋಗ ಪತ್ತೆ ಆಂದೋಲನದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮಾತನಾಡಿದರು
ಸೂಲಿಬೆಲೆಯ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ನಡೆದ ಕ್ಷಯರೋಗ ಪತ್ತೆ ಆಂದೋಲನದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮಾತನಾಡಿದರು   

ಸೂಲಿಬೆಲೆ: ಕೋವಿಡ್‌ನಿಂದ ಗುಣಮುಖ ಆಗಿರುವವರಿಗೆ ಕ್ಷಯರೋಗ ಪತ್ತೆ ಮಾಡುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಮೊದಲನೇ ಕಾರ್ಯಕ್ರಮವನ್ನು ಸೂಲಿಬೆಲೆಯಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಆರೋಗ್ಯ ಡಾ.ಕೆ. ಸುಧಾಕರ್ ಹೇಳಿದರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೋವಿಡ್‌ನಿಂದ ಗುಣಮುಖರಾದವರಿಗೆ ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎರಡು ವಾರಕ್ಕಿಂತ ಹೆಚ್ಚಿನ ಕಾಲ ಕೆಮ್ಮು, ರಾತ್ರಿ ಹೊತ್ತು ಜ್ವರ ಬರುವುದು, ಕಾರಣ ಇಲ್ಲದೆ ತೂಕ ಕಡಿಮೆಯಾಗುವುದು ಕ್ಷಯರೋಗದ ಲಕ್ಷಣಗಳಾಗಿವೆ. ಯಾವುದೇ ಆತಂಕವಿಲ್ಲದೆ ಕ್ಷಯರೋಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆತಂಕಪಟ್ಟರೆ ರೋಗ ವಾಸಿಯಾಗುವುದಿಲ್ಲ. ರೋಗಕ್ಕೆ ಚಿಕಿತ್ಸೆ ಇದೆ. ಭಯಭೀತರಾಗದೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಕ್ಷಯರೋಗ ತಪಾಸಣೆಯನ್ನು ಆಂದೋಲನ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ 31ರವರೆಗೆ ನಡೆಯಲಿದೆ. ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗುವುದು. ರೋಗ ಕಂಡುಬಂದರೆ ಉಚಿತ ಚಿಕಿತ್ಸೆ ನೀಡಲಾಗುವುದು. ರೋಗಿಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ವೈದ್ಯರು ಮಾಡಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಶಾಸಕರು ಮತ್ತು ಉಸ್ತುವಾರಿ ಸಚಿವರ ಅಪೇಕ್ಷೆಯಂತೆ ಹೊಸಕೋಟೆ ತಾಲ್ಲೂಕಿನ 2 ಪಿಎಚ್‌ಸಿಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಒಬ್ಬ ವೈದ್ಯರು ಕಾರ್ಯ ನಿರ್ವಹಿಸುತ್ತಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂವರು ವೈದ್ಯರು ಕಾರ್ಯ ನಿರ್ವಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್, ಶಾಸಕ ಶರತ್ ಬಚ್ಚೇಗೌಡ ಮಾತನಾಡಿದರು.ಜಿಲ್ಲಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಗೀತಾ, ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ. ಸತೀಶಗೌಡ, ಉಪ ನಿರ್ದೇಶಕ ಡಾ.ಶ್ರೀನಿವಾಸ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಧರ್ಮೇಂದ್ರ, ಡಾ.ಶಾಂತಲಾ, ಡಾ.ಶ್ರೀನಿವಾಸ, ಡಾ.ನಾಗೇಶ, ಡಾ.ಶಶಿಕಲಾ, ಗಿಡ್ಡಪ್ಪನಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಕ್ಬರ್ ಅಲಿಖಾನ್, ಮುಖಂಡರಾದ ಬಿ.ಜಿ. ನಾರಾಯಣಗೌಡ, ಅರಸನಹಳ್ಳಿ ನಾರಾಯಣಸ್ವಾಮಿ, ಮರವೆ ಕೃಷ್ಣಪ್ಪ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ರಘುವೀರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.