ADVERTISEMENT

ವಿಜಯಪುರ | ಅಪ್ರಾಪ್ತರಿಂದ ವಾಹನ ಚಾಲನೆ: ಕ್ರಮದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:41 IST
Last Updated 22 ಜುಲೈ 2022, 5:41 IST

ವಿಜಯಪುರ:ಪಟ್ಟಣದಲ್ಲಿ ಅಪ್ರಾಪ್ತರು ದ್ವಿಚಕ್ರವಾಹನಗಳನ್ನು ಚಾಲನೆ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಕಾನೂನು ಪ್ರಕಾರ 18 ವರ್ಷದ ಒಳಗಿನವರು ವಾಹನ ಚಾಲನೆ ಮಾಡುವಂತಿಲ್ಲ. ಪೋಷಕರು ಈ ಕುರಿತು ಗಮನಹರಿಸಬೇಕಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್‌ ವೀರೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಈಗಾಗಲೇ ಎಲ್ಲಾ ಶಾಲಾ, ಕಾಲೇಜಿನಲ್ಲಿ ವಾಹನ ಚಾಲನೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ. ರಸ್ತೆ ಸುರಕ್ಷತಾ ಸಪ್ತಾಹದ ಮೂಲಕ ಸಾರ್ವಜನಿಕರಿಗೂ ಜಾಗೃತಿ ಮೂಡಿಸುತ್ತಿದ್ದೇವೆ. ಆದರೂ, ವಿದ್ಯಾರ್ಥಿಗಳು ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಪಟ್ಟಣದ ಮುಖ್ಯರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. ಇದು ಕಾನೂನುಬಾಹಿರ ಎಂದು ತಿಳಿಸಿದ್ದಾರೆ.

ಪೋಷಕರು ಈ ಕುರಿತು ಜಾಗೃತರಾಗಬೇಕು. ಮಕ್ಕಳು ದ್ವಿಚಕ್ರವಾಹನ ಚಾಲನೆ ಮಾಡುವುದು ಕಂಡುಬಂದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ವಾಹನಗಳ ಮಾಲೀಕರ ಪರವಾನಗಿ ರದ್ದುಪಡಿಸಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಶಾಲಾ, ಕಾಲೇಜು ಬಿಟ್ಟಾಗ ಕೆಲವು ಯುವಕರು ದ್ವಿಚಕ್ರವಾಹನಗಳಲ್ಲಿ ವ್ಹೀಲಿಂಗ್ ಮಾಡುವ ಬಗ್ಗೆಯೂ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಬಂದಿವೆ. ಅಂತಹ ಯುವಕರ ಮೇಲೆ ಕಾನೂನು ಅನ್ವಯ ದೂರು ದಾಖಲಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ತಿಳಿಹೇಳಬೇಕು. ಅವರಿಗೆ ಅರಿವು ಮೂಡಿಸಿದರೆ ಅನಾಹುತಗಳು ತಪ್ಪಲಿವೆ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.