
ಮಧುಗಿರಿ: ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ, ಈ ಕುಗ್ರಾಮಗಳಿಗೆ ಬಸ್ ವ್ಯವಸ್ಥೆ ಆಗಿರಲಿಲ್ಲ. ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯಂತೆ ಬಸ್ ಸೌಕರ್ಯ ಕಲ್ಪಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.
ತಾಲ್ಲೂಕಿನ ಕಸಬಾ ವ್ಯಾಪ್ತಿಯ ಕೆ.ಸಿ. ರೊಪ್ಪದಲ್ಲಿ ಸೋಮವಾರ ಬಸ್ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಧುಗಿರಿ–ಕೆ.ಸಿ. ರೊಪ್ಪ ಮಾರ್ಗದ ಬಸ್ ಕೆ.ಸಿ.ರೊಪ್ಪ, ಹಾವೆಕಟ್ಟೆ, ಕಮ್ಮನಕೋಟೆ, ಗುಡಿರೊಪ್ಪ, ಹರಿಹರೊಪ್ಪ ಗ್ರಾಮಗಳಲ್ಲಿ ಸಂಚರಿಸಲಿದೆ. ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಸಂಚಾರ ಮಾಡಲಿದೆ. ಬಸ್ ಸೌಕರ್ಯದಿಂದ ಮಧುಗಿರಿ ಮತ್ತು ತುಮಕೂರು ನಗರಕ್ಕೆ ತೆರಳುವ ಎಂಟು ಗ್ರಾಮಗಳ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಗ್ರಾಮದ ರಸ್ತೆಗಳಿಗೆ ಬೀದಿ ದೀಪದ ವ್ಯವಸ್ಥೆ ಮಾಡಿಸಲಾಗುವುದು. ಈಗಾಗಲೇ ಮೊರಾರ್ಜಿ ವಸತಿ ಶಾಲೆಗೆ ನೀರಿನ ಸಮಸ್ಯೆ ನೀಗಿಸಲು ಬೋರ್ ವೆಲ್ ಕೊರೆಸಲಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕವನ್ನೂ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ತಡೆಗೋಡೆ ನಿರ್ಮಿಸಲಾಗುವುದು. ಶಿಥಿಲಗೊಂಡಿರುವ ಶಾಲಾ ಕೊಠಡಿಯನ್ನು ದುರಸ್ತಿಗೊಳಿಸುವುದು ಮತ್ತು ಸಮುದಾಯ ಭವನಕ್ಕೆ ಅನುದಾನ ನೀಡಲಾಗುವುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ, ಎನ್. ಗಂಗಣ್ಣ, ಸದಸ್ಯರಾದ ಲಾಲಾ ಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ಜಿ.ಪಂ. ಮಾಜಿ ಸದಸ್ಯರಾದ ಚೌಡಪ್ಪ, ಎಂ.ಎಚ್. ನಾರಾಯಣಪ್ಪ, ಗ್ರಾ. ಪಂ ಅಧ್ಯಕ್ಷೆ ಮಹಾಲಕ್ಷ್ಮಮ್ಮ, ಮಾಜಿ ಅಧ್ಯಕ್ಷ ಬಾಣದ ರಂಗಯ್ಯ, ತಹಶೀಲ್ದಾರ್ ಸಿಬ್ಗತ್‌ವುಲ್ಲಾ, ತಾ.ಪಂ. ಇಓ ಲಕ್ಷ್ಮಣ್, ಪಿಡಿಒ ಶಿವಕುಮಾರ್, ಸದಸ್ಯ ನಾಗರಾಜು, ಮುಂಖಂಡರಾದ ಎಂ.ಬಿ ಮರಿಯಣ್ಣ, ಟಿ. ರಾಮಣ್ಣ, ಗೇಟ್ ಶಿವಣ್ಣ, ಸೋಮಲಾರ ಮಂಜುನಾಥ್ , ಸಾಧಿಕ್, ಎಂ.ವಿ ಮಂಜುನಾಥ್, ಬಿ.ಎನ್.ನಾಗಾರ್ಜುನ, ದೀಪಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.