ADVERTISEMENT

ದೇವನಹಳ್ಳಿ: ನಶಾ ಮುಕ್ತ ಸಮಾಜಕ್ಕಾಗಿ ಮನೋಚೈತನ್ಯ ಶಿಬಿರ

ಮಾದಕ ಮುಕ್ತ ಕರ್ನಾಟಕ ಅಭಿಯಾನದಡಿ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 2:40 IST
Last Updated 12 ಸೆಪ್ಟೆಂಬರ್ 2025, 2:40 IST
ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ನಶಾ ಮುಕ್ತ ಕರ್ನಾಟಕ ಅಭಿಯಾನದ ಕಾರ್ಯಾಗಾರದಲ್ಲಿ ಜಾಗೃತಿ ಭಿತ್ತಿಪತ್ರವನ್ನು ಜಿ.ಪಂ ಸಿಇಒ ಕೆ.ಎನ್‌.ಅನುರಾಧ ಬಿಡುಗಡೆ ಮಾಡಿದರು
ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ನಶಾ ಮುಕ್ತ ಕರ್ನಾಟಕ ಅಭಿಯಾನದ ಕಾರ್ಯಾಗಾರದಲ್ಲಿ ಜಾಗೃತಿ ಭಿತ್ತಿಪತ್ರವನ್ನು ಜಿ.ಪಂ ಸಿಇಒ ಕೆ.ಎನ್‌.ಅನುರಾಧ ಬಿಡುಗಡೆ ಮಾಡಿದರು   

ದೇವನಹಳ್ಳಿ: ನಶಾ ಮುಕ್ತ ಸಮಾಜ ನಿರ್ಮಾಣಕ್ಕೆ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಮನೋಚೈತನ್ಯ ಶಿಬಿರ ಹಮ್ಮಿಕೊಳ್ಳುಲಾಗುವುದು. ಜೊತೆಗೆ ಸಾರ್ವಜನಿಕರು ಮಾದಕ ವಸ್ತುಗಳ ಬಳಕೆ ನಿಯಂತ್ರಿಸಲು ಜೊತೆಯಾಗಬೇಕು. ಮಾದಕ ವಸ್ತುಗಳ ಬಳಕೆ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್ ಅನುರಾಧ ತಿಳಿಸಿದರು.

ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಮಾದಕ ಮುಕ್ತ ಕರ್ನಾಟಕ ಅಭಿಯಾನದಡಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಮಾದಕ ಮುಕ್ತ ಸಮಾಜ ನಿರ್ಮಾಣ ನಮ್ಮ ಧ್ಯೇಯ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗೆ ಇಬ್ಬರು ಮಾಸ್ಟರ್ ತರಬೇತಿದಾರರು ಇರುತ್ತಾರೆ. ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾದಕ ವಸ್ತು ನಿರ್ಮೂಲನೆಗೆ ಜಾಗೃತಿ ಕಾರ್ಯಕ್ರಮ ನಡೆಸುತ್ತಾರೆ ಎಂದು ತಿಳಿಸಿದರು.

ADVERTISEMENT

ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಸುವುದು ಕೂಡ ಒಂದು ಚಟವಾಗಿದ್ದು, ಮೊಬೈಲ್ ಇಲ್ಲದೆ ಜೀವಿಸುವುದು ಕಷ್ಟಕರವಾಗಿದೆ. ಮನುಷ್ಯನ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು ಹಾಗೂ ಹವ್ಯಾಸಗಳು ಸಹ ಮಾರಕ ಎಂದು ಹೇಳಿದರು.

ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಸಮಯದಲ್ಲಿ ಯುವಕರು ಮಾದಕ ವಸ್ತುಗಳ ಗುಲಾಮರಾಗುತ್ತಿದ್ದಾರೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಮಾದಕ ವಸ್ತು ಮುಕ್ತ ಜಿಲ್ಲೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.

ಮಾದಕ ವಸ್ತುಗಳು ಸೇವನೆ ಬಳಿಕ ಅವು ವ್ಯಕ್ತಿಯ ದೇಹ ಮತ್ತು ಮೆದುಳನ್ನು ನಿರ್ವಹಿಸುವುದರಿಂದ ಆತ ಯಾರಿಗೆ ಏನು ಬೇಕಾದರು ಮಾಡಬಹುದು. ಯುವ ಸಮೂಹದವರು ಮೋಜಿಗಾಗಿ ಬಳಸಲು ಶುರು ಮಾಡುತ್ತಾರೆ, ಅದು ಕೊನೆಗೆ ಅವರ ಜೀವನದ ಅಂತ್ಯಕ್ಕೆ ಕೊಂಡೊಯ್ಯುತ್ತದೆ. ಮಾದಕ ವಸ್ತುಗಳಿಗಾಗಿ ಕಳ್ಳತನ, ಸುಲಿಗೆ ಮತ್ತು ಅಪರಾಧ ಮಾಡುತ್ತಾರೆ ಎಂದು ಅಬಕಾರಿ ಇಲಾಖೆಯ ಡಿವೈಎಸ್ಪಿ ಧರಣಿ ಕುಮಾರ್‌ ತಿಳಿಸಿದರು.

ನಶಾ ಮುಕ್ತ ಕರ್ನಾಟಕ ಅಭಿಯಾನದಡಿ ಪ್ರತಿಜ್ಞಾ ವಿಧಿ ಬೋಧಿಸಸಲಾಯಿತು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್, ಮುಖ್ಯ ಯೋಜನಾಧಿಕಾರಿ ಕೆ.ಕೆ.ರಾಮಕೃಷ್ಣಯ್ಯ, ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ ಉಪಸ್ಥಿತರಿದ್ದರು.

ವರ್ಷಕ್ಕೆ 33 ಲಕ್ಷ ಜನರ ಸಾವು

ಮಾದಕ ವಸ್ತುಗಳ ಸೇವನೆಯಿಂದ ದೇಶದಲ್ಲಿ ಪ್ರತಿ ವರ್ಷ 33 ಲಕ್ಷ ಜನರು ಸಾಯುತ್ತಿದ್ದಾರೆ. ಎನ್.ಡಿ.ಪಿ.ಎಸ್ ಕಾಯ್ದೆ 1985 ರ ಪ್ರಕಾರ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬೆಳೆಯುವುದು ಮಾರಾಟ ಮಾಡುವುದು ಖರೀದಿ ಮಾಡುವುದು ಸಾಗಣೆ ಮಾಡುವುದು ಸೇವನೆ ಮಾಡುವುದು ಮತ್ತು ಸಂಗ್ರಹಣೆ ಮಾಡುವುದು ನಿಷೇಧ ಎಂದು ಹೇಳುತ್ತದೆ. ಈ ರೀತಿ ಕಂಡುಬಂದರೆ ಗರಿಷ್ಠ 20 ವರ್ಷ ಜೈಲು ಶಿಕ್ಷೆ ಹಾಗೂ ₹ 2 ಲಕ್ಷ ದಂಡ ವಿಧಿಸಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಈ ರೀತಿಯ ಮಾದಕ ಮುಕ್ತ ಸಮಾಜವನ್ನು ನಿರ್ಮಿಸಲು ಜಾಗೃತಿ ಮೂಡಿಸುವ ಸಲುವಾಗಿ ನಮ್ಮೊಂದಿಗೆ ಸಹಕರಿಸಬೇಕು ಎಂದು ಅಬಕಾರಿ ಇಲಾಖೆಯ ಡಿವೈಎಸ್ಪಿ ಧರಣಿ ಕುಮಾರ್ ಹೇಳಿದರು.

ದೇಹದ ಮೇಲಾಗುವ ದುಷ್ಪರಿಣಾಮ

ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ನರ ಮಂಡಲ ನರಕೋಶ ಹೃದಯ ಮೂತ್ರ ಪಿಂಡ ಶ್ವಾಸಕೋಶ ಕ್ಯಾನ್ಸರ್‌ಗೆ ಸಂಬಂದಿಸಿದ ಕಾಯಿಲೆಗಳು ಉಲ್ಬಣವಾಗುತ್ತದೆ. ಹಾಗೇ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ ಕೈ ಕಾಲು ನಡುಗುವುದು ಮೂರ್ಛೆ ಹೋಗುವುದು ಅತಿರೇಕದ ಚಟುವಟಿಕೆ ತೂಕದಲ್ಲಿ ಏರಿಳಿತ ನಿದ್ದೆಯಲ್ಲಿ ಏರುಪೇರು ಹಾಗೂ ಪ್ರಜ್ಞೆಯಿಲ್ಲದ ರೀತಿ ವರ್ತಿಸುವುದು ಹೀಗೆ ಹಲವಾರು ದುಷ್ಪರಿಣಾಮಗಳಿಗೆ ಒಳಗಾಗುತ್ತಾರೆ ಎಂದು ಮಾನಸಿಕ ರೋಗ ತಜ್ಞ ಡಾ.ಗಿರೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.