ದೊಡ್ಡಬಳ್ಳಾಪುರ: ಮೇ 2 ರಿಂದ ನಗರದ 14 ಮತ್ತು 15ನೇ ವಾರ್ಡ್‌ಗಳಲ್ಲಿ ಮೊದಲ ಹಂತದ ಇ-ಖಾತಾ ಆಂದೋಲನ ಪ್ರಾರಂಭವಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತ ಅಧಿಕಾರಿ ಸಿ.ಎಸ್. ಕರೀಗೌಡ ತಿಳಿಸಿದರು.
ಅವರು ಸೋಮವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಮೇ 2 ರಿಂದ ಪ್ರಾರಂಭವಾಗುವ ಇ-ಖಾತಾ ಆಂದೋಲನ ಪ್ರತಿ ದಿನವು ಒಂದೊಂದು ವಾರ್ಡ್‌ಗಳಲ್ಲಿ ನಡೆಯಲಿದೆ. ಯಾವ ದಿನ ಎಲ್ಲಿ ಎನ್ನುವ ದಿನಾಂಕ, ಸಮಯ, ಸ್ಥಳ ಹಾಗೂ ಇ-ಖಾತೆಗೆ ಅಗತ್ಯ ಇರುವ ದಾಖಲಾತಿಗಳ ವಿವರಗಳನ್ನು ಒಳಗೊಂಡ ಮಾಹಿತಿ ಕರಪತ್ರವನ್ನು ಮೇ 1ರಿಂದ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು ಎಂದರು.
ಬೆಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಯಾಗಿರುವ ಲೇಔಟ್‌ಗಳಲ್ಲಿನ ನಿವೇಶನಗಳ ಇ-ಖಾತೆಗಳನ್ನು ಸಹ ಮಾಡಲಾಗುತ್ತಿದೆ. ಅಗತ್ಯ ದಾಖಲಾತಿಗಳನ್ನು ನೀಡಿದವರಿಗೆ ಸ್ಥಳದಲ್ಲೇ ಇ-ಖಾತೆ ಪತ್ರವನ್ನು ವಿತರಣೆ ಮಾಡಲಾಗುವುದು ಎಂದರು.
ನಗರದಲ್ಲಿ ಮೊದಲ ಹಂತದಲ್ಲಿ ಸುಮಾರು 6 ಸಾವಿರ ಸ್ವತ್ತುಗಳಿಗೆ ಇ-ಖಾತೆಗಳನ್ನು ಮಾಡಿಕೊಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಹೆಚ್ಚುವರಿ ಕಂಪ್ಯೂಟರ್ ಹಾಗೂ ತಾತ್ಕಾಲಿಕವಾಗಿ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುವಂತೆಯೂ ಸೂಚನೆ ನೀಡಿದರು.
ಮೇ 22ವರೆಗೆ ಗಡುವು: ಮಳೆ ನೀರು ಸಂಗ್ರಹ ಮಾಡಿಕೊಳ್ಳುವಂತೆ ಕಲ್ಯಾಣ ಮಂದಿರ, ಚಿತ್ರಮಂದಿರಗಳ ಮಾಲೀಕರಿಗೆ ಈಗಾಗಲೇ ನೋಂದಾಯಿತ ಅಂಚೆ ಮೂಲಕ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಅಲ್ಲದೆ ಪೌರಾಯುಕ್ತರು ಎಲ್ಲ ಮಾಲೀಕರ ಸಭೆಯನ್ನು ನಡೆಸಿದ್ದಾರೆಎಂದರು.
ಕೆಲವರು ಮಾತ್ರ ಮಳೆ ನೀರು ಸಂಗ್ರಹ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗಡುವು ಮುಕ್ತಾಯವಾದ ನಂತರ ಪರವಾನಿಗಿಯನ್ನು ರದ್ದುಪಡಿಸಲಾಗುವುದು. ಯಾವುದೇ ಕಾರಣಕ್ಕು ಗಡುವನ್ನು ವಿಸ್ತರಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಜಿಲ್ಲೆಯ ನಾಲ್ಕು ತಾಲ್ಲೂಕಿನ ನಗರಸಭೆ ವ್ಯಾಪ್ತಿಯಲ್ಲೂ 30–40 ಕ್ಕಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಕಟ್ಟಡಗಳು, ಕೈಗಾರಿಕಾ ಪ್ರದೇಶದ ಕಟ್ಟಡ ಸೇರಿದಂತೆ ಎಲ್ಲರೂ ಸಹ ಮಳೆ ನೀರು ಸಂಗ್ರಹ ಮಾಡಿಕೊಳ್ಳುವಂತೆ ನೋಟಿಸ್ ನೀಡಿ ಸಭೆಗಳನ್ನು ನಡೆಸಲಾಗಿದೆ. ಮಳೆ ನೀರು ಸಂಗ್ರಹ ಮಾಡಿಕೊಳ್ಳದಿದ್ದರೆ ಪರವಾನಿಗಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮರು ಬಳಕೆಗೆ ಕ್ರಮ: ನಗರದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ವ್ಯರ್ಥವಾಗಿ ಹೋಗುತ್ತಿರುವ ಸುಮಾರು 50 ಸಾವಿರ ಲೀಟರ್ ನೀರನ್ನು ಮರುಬಳಕೆ ಮಾಡಿಕೊಳ್ಳಲು ಅಗತ್ಯ ಇರುವ ಕಾಮಗಾರಿಗಳಿಗೆ ಅವರು ಅನುಮೋದನೆ ನೀಡಿದರು.
ನಗರಸಭೆ ಪೌರಾಯುಕ್ತ ಆರ್.ಮಂಜುನಾಥ್ ಹಾಗೂ ಕಲ್ಯಾಣ ಮಂದಿರ, ಚಿತ್ರಮಂದಿರಗಳ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.