ಹೊಸಕೋಟೆ: ಹೊಸಕೋಟೆ ತಾಲ್ಲೂಕಿನಲ್ಲಿ ಶೇ 68.57ರಷ್ಟು ಇ–ಖಾತೆ ವಿತರಣೆ ಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ‘ಇ–ಖಾತಾ ಆಂದೋಲನ’ದಲ್ಲಿ ಮಾತನಾಡಿದರು.
ಬಿ–ಖಾತಾ ಆಂದೋಲನದ ಮೂಲಕ ಕಾವೇರಿ ತಂತ್ರಾಂಶದಲ್ಲಿ ಯಾರು ಇ–ಖಾತಾ ನೋಂದಣಿ ಮಾಡಿಕೊಳ್ಳುತ್ತಾರೋ ಅವರೆಲ್ಲರ ಆಸ್ತಿಗಳು ನಮೂದಾಗಿ ಹೆಚ್ಚು ಪಾರದರ್ಶಕವಾಗಲಿದ್ದು, ಮುಂದಿನ ವ್ಯವಹಾರಗಳಿಗೆ ಸುಲಭವಾಗಲಿದೆ ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 1850 ಆಸ್ತಿಗಳಿವೆ. 12537 ಆಸ್ತಿ ಎ ಖಾತೆಯಾಗಿವೆ. 5965 ಆಸ್ತಿಗಳಿಗೆ ಬಿ–ಖಾತೆಗಳಿವೆ ಎಂದರು.
ಕೈಬರಹದಲ್ಲಿ ಖಾತೆ ಬರೆಯುತ್ತಿದ್ದಾಗ ಹಲವು ತಪ್ಪುಗಳಾಗುತ್ತಿದ್ದವು. ಕೆಲವರಿಗೆ ಮೋಸವಾಗುತ್ತಿತ್ತು. ಇದೆಲ್ಲದರ ನಡುವೆ ಜನರು ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು. 2016ರಲ್ಲಿ ಇ–ಖಾತೆ ಪರಿಚಯ ಮಾಡಲಾಯಿತು. ಇದರಿಂದ ಜನರು ಖಾತೆಗಳಿಗಾಗಿ ಕಚೇರಿಗಳನ್ನು ಅಲೆದಾಡುವುದು ತಪ್ಪಿತು ಎಂದು ನಗರಸಭೆಯ ಪೌರಾಯುಕ್ತ ನೀಲಾಲೋಚನ ಪ್ರಭು ಹೇಳಿದರು.
ಉದ್ಯಮಿಗಳಾದ ಬಿ.ವಿ.ಬೈರೇಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವಮೂರ್ತಿ, ಮಾಜಿ ನಿರ್ದೇಶಕ ಎಚ್.ಎಂ.ಸುಬ್ಬರಾಜು, ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ನಾಮನಿರ್ದೇಶಿತ ಸದಸ್ಯ ಎನ್.ನಾಗರಾಜ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ್‌ಕುಮಾರ್, ಜಯರಾಜ್, ನಗರಸಭಾ ಸದಸ್ಯ ಗೌತಮ್, ನಾಗರಾಜ್, ಅಮ್ಜದ್, ರಮಾದೇವಿ, ಗಣೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.