ದೊಡ್ಡಬಳ್ಳಾಪುರ: ನಗರದಲ್ಲಿ ಇ-ಖಾತೆ, ಕಟ್ಟಡ ಪರವಾನಗಿ ಪಡೆಯಲು ಸಾರ್ವಜನಿಕರು ತೀವ್ರ ತೊಂದರೆಪಡುತ್ತಿರುವ ಬಗ್ಗೆ ಗುರುವಾರ ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸದಸ್ಯರ ಮಾಸಿಕ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ವಡ್ಡರಹಳ್ಳಿರವಿ, ಪ್ರಕಾಶ್, 1976ಕ್ಕೂ ಹಿಂದೆ ಭೂ ಪರಿವರ್ತನೆ ಆಗಿರುವ ನಿವೇಶನ ಮಾತ್ರ ಇ-ಖಾತೆ ಮಾಡಿಕೊಡುವುದಾಗಿ ಹೇಳಲಾಗುತ್ತಿದೆ ಎಂದು ತಿಳಿಸಿದರು.
ಇ-ಖಾತೆ ಇಲ್ಲದೆ ಯಾವುದೇ ಬ್ಯಾಂಕಿನಲ್ಲಿ ಮನೆ ಕಟ್ಟಲು ಗೃಹ ಸಾಲ ನೀಡುವುದಿಲ್ಲ. ಹಾಗೆಯೇ ನಗರಸಭೆ ವತಿಯಿಂದ ಕಟ್ಟಡ ಪರವಾನಗಿ ನೀಡುತ್ತಿಲ್ಲ ಎಂದರು.
ಮುತ್ಸಂದ್ರ ವಾರ್ಡ್ ಈ ಹಿಂದೆ ರಾಜಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತು. 1996ರಲ್ಲಿ ರಾಜ್ಯ ಪತ್ರದ ಆದೇಶದಂತೆ ಪುರಸಭೆಗೆ ಒಳಪಟ್ಟಿದೆ ಎಂದು ಮಾಹಿತಿ ನೀಡಿದರು.
ಅಲ್ಲಿನ ಖಾತೆಗಳ ದಾಖಲಾತಿ ನಗರಸಭೆಗೆ ನೀಡಲಾಗಿದೆ. ಆದರೆ, ಈಗ ಪಾವತಿ ಖಾತೆ, ಖಾತೆ ವರ್ಗಾವಣೆ ಯಾವುದೈ ಆಗುತ್ತಿಲ್ಲ. ಯಾವುದೇ ಖಾತೆ ಬದಲಾಗಬೇಕಾದರೂ ಮೂಲ ದಾಖಲೆ ಹಾಜರುಪಡಿಸುವಂತೆ ಹೇಳುತ್ತಾರೆ ಎಂದರು.
ಇಲ್ಲಿನ ನಿವಾಸಿಗಳು ಹತ್ತಾರು ವರ್ಷಗಳಿಂದ ವಾಸವಿದ್ದು ಗ್ರಾಮ ಪಂಚಾಯಿತಿ ವತಿಯಿಂದ ಮಂಜೂರಾಗಿರುವ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದರು.
ಇಂತಹ ನಿವಾಸಿಗಳಿಂದ ಮೂಲ ದಾಖಲಾತಿ ಕೇಳಿದರೆ ಎಲ್ಲಿಂದ ತಂದು ಕೊಡಲು ಸಾಧ್ಯ. ಇ-ಖಾತೆಗಳಲ್ಲಿನ ಗೊಂದಲದಿಂದ ನಗರಸಭೆಗೆ ಬರಬೇಕಾಗಿರುವ ಆದಾಯ ಕಡಿಮೆಯಾಗಿದೆ ಎಂದರು.
ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಧಿಕಾರಿ ಬಳಿಗೆ ನಿಯೋಗ ಕರೆದುಕೊಂಡು ಹೋಗಿ ಇಲ್ಲಿನ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ಈಗ ಸರ್ಕಾರ ಹೊರಡಿಸಿರುವ ಆದೇಶ ಮಾರ್ಪಾಡಿಸುವಂತೆ ಮನವಿ ಮಾಡಬೇಕು. ಈ ಬಗ್ಗೆ ಕ್ಷೇತ್ರದ ಶಾಸಕರ ಗಮನಕ್ಕೂ ತರಬೇಕಿದೆ ಎಂದರು.
ಪೌರಾಯುಕ್ತ ಆರ್.ಮಂಜುನಾಥ ಉತ್ತರ ನೀಡಿ, ಸರ್ಕಾರದ ನಿಯಮ ಮೀರುವಂತಿಲ್ಲ. ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆಯಾದರೂ ಖಾತೆ ವಿಚಾರದಲ್ಲಿ ಕಾನೂನು ಬದಲಾವಣೆ ಆಗುವುದಿಲ್ಲ ಎಂದರು.
ಇದು ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಮಾಡಲಾಗಿರುವ ಆದೇಶವಾಗಿದೆ. ಈ ಆದೇಶ ಸರ್ಕಾರದ ಮಟ್ಟದಲ್ಲಿಯೇ ಬದಲಾವಣೆಯಾಗಬೇಕಿದೆ ಎಂದರು.
ತಾರತಮ್ಯ: ನಗರಸಭೆ ನಿಧಿಯಲ್ಲಿ ವಿವಿಧ ವಾರ್ಡ್‌ಗಳಿಗೆ ಕಾಮಗಾರಿ ಹಂಚಿಕೆ ಮಾಡುವಲ್ಲಿ ಅಧ್ಯಕ್ಷರು ತಾರತಮ್ಯ ಮಾಡಿದ್ದಾರೆ. ತುರ್ತು ಕಾಮಗಾರಿಗಳ ಹೆಸರಿನಲ್ಲಿ ಕೆಲವರ ವಾರ್ಡ್ ಗಳಿಗೆ ಮಾತ್ರ ಹೆಚ್ಚಿನ ಕಾಮಗಾರಿಕೆ ಹಂಚಿಕೆ ಮಾಡಲಾಗಿದೆ ಎಂದು ಸದಸ್ಯರಾದ ಎಂ.ಮಲ್ಲೇಶ್, ಪಿ.ಸಿ.ಲಕ್ಷ್ಮೀನಾರಾಯಣ್, ಪ್ರಕಾಶ್, ಶಿವಕುಮಾರ್, ಮಂಜುಳಾ ಆಂಜನೇಯ ಆಕ್ಷೇಪ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಿದ ಕಾಮಗಾರಿ ಹೊರತುಪಡಿಸಿ ತುರ್ತು ಕಾಮಗಾರಿಗಳ ಹೆಸರಿನಲ್ಲಿ ತಮಗೆ ಬೇಕಾದ ವಾರ್ಡ್‌ಗಳಿಗೆ ಕಾಮಗಾರಿ ಹಾಕಲಾಗಿದೆ. ಈ ಪಟ್ಟಿಯನ್ನು ಕೈ ಬಿಟ್ಟು ಹೊಸದಾಗಿ ಪಟ್ಟಿ ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದರು.
ಸದಸ್ಯರು ಹೊಸದಾಗಿ ಕಾಮಗಾರಿಗಳ ಪಟ್ಟಿ ನೀಡಿದರೆ ಅವನ್ನು ಪಟ್ಟಿಯಲ್ಲಿ ಸೇರಿಸಲಾಗುವುದು. ಇದರಲ್ಲಿ ತಾರತಮ್ಯದ ಪ್ರಶ್ನೆಯೇ ಇಲ್ಲ ಎಂದು ಅಧ್ಯಕ್ಷ ಟಿ.ಎನ್.ಪ್ರಭುದೇವ್ ತಿಳಿಸಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿ ನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಕೆ.ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.