ADVERTISEMENT

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಉತ್ತೇಜನ ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 13:17 IST
Last Updated 11 ಫೆಬ್ರುವರಿ 2020, 13:17 IST
ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿದರು
ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ‘ನಮ್ಮ ಕಲೆ ಸಂಸ್ಕೃತಿ ಪರಂಪರೆಗಳನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕು’ ಎಂದು ಶಾಸಕ ಟಿ.ವೆಂಕಟರಮಣಯ್ಯ ಎಂದು ಹೇಳಿದರು.

ಶ್ರೀಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಜಾಗೃತ ಪರಿಷತ್‌, ತಾಲ್ಲೂಕು ಕಲಾವಿದರ ಸಂಘ ಹಾಗೂ ಅನಿಕೇತನ ಟ್ರಸ್ಟ್ ಸಹಯೋಗದೊಂದಿಗೆ ನಗರದ ತೇರಿನ ಬೀದಿ ವಿಶ್ವೇಶ್ವರಯ್ಯ ವೃತ್ತದ ಮೈದಾನದಲ್ಲಿ ನಡೆದ ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೊಡ್ಡಬಳ್ಳಾಪುರದಲ್ಲಿ ಮೇರು ಕಲಾವಿದರಿದ್ದಾರೆ. ನಮ್ಮ ಸಂಸ್ಕೃತಿಕ ಪರಂಪರೆಗಳನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಸಾಂಸ್ಕೃತಿಕ ಸೊಗಡಿನ ಕಲೆಯ ಅನಾವರಣಗೊಳಿಸುವ ವೇದಿಕೆಗಳ ಅಗತ್ಯವಿದೆ. ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕಲೆ ಉಳಿಯುತ್ತಿರುವುದಕ್ಕೆ ಇಂತಹ ನಾಟಕೋತ್ಸವಗಳು ನಿದರ್ಶನವಾಗಿದ್ದು, ಇಂತಹ ಕಲಾವಿದರಿಗೆ ಜಾತ್ರಾ ನಾಟಕೋತ್ಸವ ಉತ್ತಮ ವೇದಿಕೆ ನೀಡಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಮುದಾಯ ಸಹ ನೆರವು ನೀಡಿದರೆ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರಿಯಾಗಲಿದ್ದು, ಕಾರ್ಯಕ್ರಮಗಳಿಗೆ ನೆರವು ನೀಡುವುದಾಗಿ ಭರವಸೆ ನೀಡಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್ ಮಾತನಾಡಿ, ‘ಸಿನಿಮಾ, ವಿದ್ಯುನ್ಮಾನ ಮಾಧ್ಯಮಗಳ ಮನರಂಜನೆಗಳ ಪೈಪೋಟಿಗಳ ನಡುವೆಯೂ ರಂಗ ಕಲೆ ಜೀವಂತವಾಗಿದ್ದು,ಕಲಾವಿದರು ತಮ್ಮ ಕಲೆಯನ್ನು ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆಗಳನ್ನು ಕಲ್ಪಿಸಿಕೊಡಬೇಕಾದ ಹೊಣೆ ಸಮುದಾಯದ ಮೇಲಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕನ್ನಡ ಪರ ಹೋರಾಟಗಾರ ಟಿ.ಎನ್.ಪ್ರಭುದೇವ್ ಮಾತನಾಡಿ, ‘ಪೌರಾಣಿಕ ನಾಟಕಗಳನ್ನು ಪ್ರದರ್ಶಿಸಲು ಹೆಚ್ಚಿನ ವೆಚ್ಚವಾಗುತ್ತಲಿದ್ದರೂ, ಕಲಾವಿದರ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಕಲೆಯನ್ನು ನಂಬಿ ಬದುಕುವುದು ದುಸ್ತರವಾಗುತ್ತಿದೆ. ಸರ್ಕಾರ ಕಲೆ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಲಾವಿದರಿಗೆ ಹೆಚ್ಚಿನ ಧನ ಸಹಾಯ ನೀಡುವುದರೊಂದಿಗೆ ಕಲಾ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ನೀಡಬೇಕಿದೆ. ಸರ್ಕಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ರೂಪಿಸಬೇಕಿದೆ’ ಎಂದರು.

ಕನ್ನಡ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ ಮಾತನಾಡಿ, ‘ದೊಡ್ಡಬಳ್ಳಾಪುರದ ಸಾಂಸ್ಕೃತಿಕ ಪರಂಪರೆಗೆ ತೇರಿನ ಬೀದಿಯ ನಾಟಕೋತ್ಸವ ಕೊಡುಗೆ ಅಪಾರವಾಗಿದೆ. ಇದಕ್ಕೆ ಹಿಂದಿನ ಕಲಾವಿದರ ಹಾಗೂ ಆಯೋಜಕರ ಶ್ರಮ ಸ್ಮರಣೀಯ’ ಎಂದರು.

ಸಮಾರಂಭದಲ್ಲಿ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ತಿ.ರಂಗರಾಜು, ನಗರಸಭೆ ಪೌರಾಯುಕ್ತ ಆರ್.ಮಂಜುನಾಥ್, ತಾಲ್ಲೂಕು ಕನ್ನಡ ಪಕ್ಷ ಅಧ್ಯಕ್ಷ ಎಂ.ಸಂಜೀವ್ ನಾಯಕ್, ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್ ಮಲ್ಲಾತಹಳ್ಳಿ, ಉಪಾಧ್ಯಕ್ಷ ಮುನಿರಾಜು, ನಿರ್ದೇಶಕರಾದ ಸಿ.ಎಚ್.ಕೃಷ್ಣಮೂರ್ತಿ, ಎಂ.ವೆಂಕಟರಾಜು, ಕರ್ನಾಟಕ ನವಚೇತನ ಕಲಾನಿಕೇತನ ಸಂಸ್ಥಾಪಕರಾದ ಲೀಲಾವತಿ, ನಿವೃತ್ತ ದೈಹಿಕ ಶಿಕ್ಷಕ ಅಧಿಕಾರಿ ಬಿ.ಜಿ.ಅಮರನಾಥ್, ಶಿಕ್ಷಕ ಎಚ್.ಎನ್.ಪ್ರಕಾಶ್, ಸಾಂಸ್ಕೃತಿಕ ಸಮಿತಿಯ ಡಿ.ಶ್ರೀಕಾಂತ, ನಂದ ಕುಮಾರ್, ಪ್ರಕಾಶ್ ರಾವ್, ವೆಂಕಟೇಶ್ ಇದ್ದರು.

ಕಾರ್ಯಕ್ರಮದ ಅಂಗವಾಗಿ ಬಾಶೆಟ್ಟಿಹಳ್ಳಿಯ ಯು.ಎಂ.ಮಂಜುನಾಥ್ ಕಲಾ ತಂಡದವರಿಂದ ನೃತ್ಯ ಕಾರ್ಯಕ್ರಮ, ಮುತ್ಯಾಲಮ್ಮದೇವಿ ಕಲಾತಂಡದಿಂದ ಭರತನಾಟ್ಯ, ಹಾಗೂ ರಾತ್ರಿ, ತೇರಿನ ಬೀದಿಯ ಶ್ರೀ ಆಂಜನೇಯಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ಇವರಿಂದ ಎಲ್.ಎಸ್.ಬಸವರಾಜಯ್ಯ ನಿರ್ದೇಶನದಲ್ಲಿ ಶ್ರೀ ಕೃಷ್ಣ ಗಾರುಡಿ ಪೌರಾಣಿಕ ನಾಟಕ ಪ್ರದರ್ಶನ ಪ್ರದರ್ಶನಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.