ದೇವನಹಳ್ಳಿ: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಜೊತೆಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹಾಲು ಉತ್ಪಾದಕರು ಹಾಲಿನ ಗುಣಮಟ್ಟ ಕಾಯ್ದುಕೊಳ್ಳುವ ಜೊತೆಗೆ ಉತ್ಪಾದನೆಯಲ್ಲಿ ಜಿಲ್ಲೆಯ ಹೆಸರು ಮುಂಚೂಣಿಯಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಹೇಳಿದರು.
ಪಟ್ಟಣದ ಬೆಂಗಳೂರು ಹಾಲು ಒಕ್ಕೂಟದ ದೇವನಹಳ್ಳಿ ಶಿಬಿರ ಕಚೇರಿಯ ಪೂಜಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದೆ. ಇದನ್ನು ಹಾಗೇ ಕಾಪಾಡಿಕೊಂಡು ಹೋಗಬೇಕು. ಹೈನುಗಾರಿಕೆ ಪ್ರೋತ್ಸಾಹಿಸಲು ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದು. ರೈತರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
ಜಿಲ್ಲೆಯಲ್ಲಿ ರೇಷ್ಮೆ ಕೃಷಿಕರ ಸಂಖ್ಯೆ ಕಡಿಮೆ ಇದೆ. ರೇಷ್ಮೆ ಕೃಷಿ ಪ್ರೋತ್ಸಾಹಕ್ಕೆ ಸರ್ಕಾರ ಹಲವು ಸವಲತ್ತು ನೀಡುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಗಮನಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಬೆಂಗಳೂರು ಹಾಲು ಒಕ್ಕೂಟದ ನೂತನ ನಿರ್ದೇಶಕ .ಪಿ.ಮುನಿರಾಜು, ‘ಹಾಲು ಉತ್ಪಾದಕರಿಗೆ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯವನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು. ಹಾಲು ಉತ್ಪಾದಕರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ’ ಎಂದು ತಿಳಿಸಿದರು.
ಬೆಂಗಳೂರು ಹಾಲು ಒಕ್ಕೂಟ ಹಾಲಿ ಉಪಧ್ಯಾಕ್ಷ ಮಂಜುನಾಥ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರಾಜಣ್ಣ, ಬಯಪ ಅಧ್ಯಕ್ಷ ಶಾಂತಕುಮಾರ್, ನಿರ್ದೇಶಕರಾದ ಪ್ರಸನ್ನ ಕುಮಾರ್, ಸದಸ್ಯರಾದ ಮಂಜಣ್ಣ, ದೇವನಹಳ್ಳಿ ಪುರಸಭೆ ಅಧ್ಯಕ್ಷ ಮುನಿಕೃಷ್ಣಪ್ಪ ಇದ್ದರು.
ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ. ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು-ಕೆ.ಎಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.