ADVERTISEMENT

ಸಮೀಪಿಸಿದ ಜೂನ್‌ ಅಂತ್ಯ, ಫಲಾನುಭವಿಗಳು ಅತಂತ್ರ!

ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಆತಂಕ

ಎಂ.ಮುನಿನಾರಾಯಣ
Published 24 ಜೂನ್ 2019, 13:24 IST
Last Updated 24 ಜೂನ್ 2019, 13:24 IST
ವಿಜಯಪುರದ ಕೋಟಕ್ ಮಹಿಂದ್ರಾ ಬ್ಯಾಂಕಿನ ಮುಂದೆ ಆಧಾರ್‌ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಮುಗಿಬಿದ್ದ ಜನರು (ಸಂಗ್ರಹ ಚಿತ್ರ)
ವಿಜಯಪುರದ ಕೋಟಕ್ ಮಹಿಂದ್ರಾ ಬ್ಯಾಂಕಿನ ಮುಂದೆ ಆಧಾರ್‌ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಮುಗಿಬಿದ್ದ ಜನರು (ಸಂಗ್ರಹ ಚಿತ್ರ)   

ವಿಜಯಪುರ: ‘ಮಾಸಾಶನಕ್ಕೆ ಆಧಾರ್ ಜೋಡಣೆಕಡ್ಡಾಯ ಮಾಡಿರುವುದರಿಂದ ಸಾಮಾಜಿಕ ಭದ್ರತಾ ಯೋಜನೆಯ ಅನೇಕ ಫಲಾನುಭವಿಗಳಿಗೆ ಇದು ಸ್ಥಗಿತಗೊಳ್ಳುವ ಆತಂಕ ಕಾಡುತ್ತಿದೆ’ ಎಂದು ಸಮಾಜ ಸೇವಕ ಮುನಿಯಪ್ಪ ತಿಳಿಸಿದರು.

ನಾನಾ ಯೋಜನೆಗಳ ಫಲಾನುಭವಿಗಳು ಜೂನ್ ಅಂತ್ಯದೊಳಗೆ ಆಧಾರ್ ಸಂಖ್ಯೆಯನ್ನು ಸಂಬಂಧಪಟ್ಟ ತಾಲ್ಲೂಕು ಕಚೇರಿಗೆ ನೀಡಬೇಕು. ಇಲ್ಲದಿದ್ದಲ್ಲಿ ಮಾಸಾಶನ ಆದೇಶ ರದ್ದಾಗುತ್ತದೆ ಎಂದು ಅಧಿಕಾರಿಗಳು ಆದೇಶ ಹೊರಡಿಸಿದೆ. ಇದರಿಂದ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದರು.

ಹಲವು ಯೋಜನೆಗಳಿಂದ ಮಾಸಾಶನ: ವೃದ್ಧಾಪ್ಯ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ, ವಿಧವಾ ಪಿಂಚಣಿ ಯೋಜನೆ ಹೀಗೆ ಹಲವು ಯೋಜನೆಗಳಲ್ಲಿ ಪ್ರತಿ ತಿಂಗಳು ಸರ್ಕಾರ ಹಣ ನೀಡುತ್ತಿದೆ. ಈಗ ನೇರವಾಗಿ ಆಯಾ ಫಲಾನುಭವಿಗಳ ಬ್ಯಾಂಕ್‌ಗಳ ಉಳಿತಾಯ ಖಾತೆಗೆ ಜಮೆ ಮಾಡಲು ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ಅನರ್ಹರ ಪತ್ತೆ, ದುರ್ಬಳಕೆಗೆ ಕಡಿವಾಣ ಹಾಕಲು ಕಡ್ಡಾಯವಾಗಿ ಫಲಾನುಭವಿಗಳಿಂದ ಆಧಾರ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆ ಸಂಖ್ಯೆ ಪಡೆಯಲಾಗುತ್ತಿದೆ.

ADVERTISEMENT

ತಿದ್ದುಪಡಿಗೆ ಪರದಾಟ:ರಾಷ್ಟ್ರೀಕೃತ ಬ್ಯಾಂಕ್‌ಗಳು, ಅಂಚೆ ಕಚೇರಿಗಳ ಜತೆಗೆ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎನ್ನುವುದು ಜಿಲ್ಲಾಡಳಿತದ ಹೇಳಿಕೆ. ವಿದ್ಯುತ್ ಮತ್ತು ಆನ್‌ಲೈನ್ ಸಮಸ್ಯೆ, ಸಿಬ್ಬಂದಿ ಕೊರತೆ ನೆಪದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಫಲಾನುಭವಿಗಳನ್ನು ಬೇರೆಡೆಗೆ ಕಳುಹಿಸುತ್ತಿದ್ದಾರೆ.

ಆಯ್ದ ಬ್ಯಾಂಕ್‌ಗಳಲ್ಲಿ ಮಾತ್ರ ತಿದ್ದುಪಡಿಯಾಗುತ್ತಿದೆ. ಅದೂ ದಿನಕ್ಕೆ 20 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತಿದೆ. ಇದರಿಂದ ಸಾವಿರಾರು ಮಂದಿ ಆಧಾರ್ ಕೇಂದ್ರಗಳ ಮುಂಭಾಗ ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ಸರದಿಯಲ್ಲಿ ನಿಲ್ಲಬೇಕಾಗಿದೆ. ಪ್ರಸ್ತುತ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಮಾತ್ರ ತಿದ್ದುಪಡಿಗೆ ಅವಕಾಶ ಸಿಗುತ್ತಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ತಿದ್ದುಪಡಿ ಮಾಡಿಸುವವರ ಅರ್ಜಿಯ ಬುಕ್ಕಿಂಗ್ ಮುಗಿದಿದೆ ಎಂದು ಜನರು ಹೇಳುತ್ತಿದ್ದಾರೆ.

ಅಸಹಾಯಕರ ನೋವು: ವೃದ್ಧರು, ಅಂಗವಿಕಲರು, ಅಸಹಾಯಕ ಮಹಿಳೆಯರು ಸರ್ಕಾರದ ಪಿಂಚಣಿಯನ್ನೇ ನೆಚ್ಚಿಕೊಂಡಿದ್ದಾರೆ. ಇದಕ್ಕೆ ಸವಲತ್ತಿನಿಂದ ವಂಚಿತರಾಗದಿರಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಮಾಸಾಶನಕ್ಕೆ ಅರ್ಜಿ ಸಲ್ಲಿಸುವಾಗಲೇ ಆಧಾರ್ ಪಡೆದುಕೊಂಡಿರುವ ಅಧಿಕಾರಿಗಳು, ಇದೀಗ ಅದರಲ್ಲಿನ ಕೆಲ ಲೋಪಗಳನ್ನು ಸರಿಪಡಿಸಲು, ಹುಟ್ಟಿದ ದಿನಾಂಕ ಮತ್ತು ಮೊಬೈಲ್ ಸಂಖ್ಯೆ ಸೇರಿಸಲು ಸೂಚಿಸುತ್ತಿದ್ದಾರೆ. ಆದರೆ ಇದು ಕೇಂದ್ರಗಳಲ್ಲಿ ಅಷ್ಟು ಸುಲಭವಾಗಿ ನಡೆಯುತ್ತಿಲ್ಲ. ಇದಕ್ಕೆ ಆಧಾರ್ ಸಂಖ್ಯೆ ಜೋಡಣೆ ಗಡುವು ವಿಸ್ತರಣೆ, ಇಲ್ಲವೇ ತ್ವರಿತ ಮತ್ತು ಸುಗಮ ಆಧಾರ್ ತಿದ್ದುಪಡಿಗೆ ಸಂಬಂಧಪಟ್ಟವರಿಗೆ ಸೂಚಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.