ADVERTISEMENT

ಸಂವಿಧಾನ ಅನುಷ್ಠಾನದಲ್ಲಿ ದೋಷ

ದಲಿತ ಜಾಗೃತಿ ಕಾರ್ಯಾಗಾರದಲ್ಲಿ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ ದಾಸ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 1:32 IST
Last Updated 18 ಜನವರಿ 2021, 1:32 IST
ಮಾಗಡಿ ಡಿಎಚ್‌ಎಸ್‌ ವತಿಯಿಂದ ನಡೆದ ದಲಿತ ಜಾಗೃತಿ ಕಾರ್ಯಾಗಾರದಲ್ಲಿ ನಿವೃತ್ತ ನ್ಯಾಯಾಧೀಶರಾದ ಎಚ್‌.ಎನ್‌.ನಾಗಮೋಹನ ದಾಸ್‌ ಮಾತನಾಡಿದರು. ಸಮಾಜ ವಿಜ್ಞಾನಿ ಜಿ.ಎನ್‌.ನಾಗರಾಜ್‌, ಬಿ.ರಾಜಶೇಖರ ಮೂರ್ತಿ, ಎಸ್‌.ಜಿ.ವನಜ, ಚಿಕ್ಕರಾಜು.ಎಸ್‌ ಇದ್ದರು
ಮಾಗಡಿ ಡಿಎಚ್‌ಎಸ್‌ ವತಿಯಿಂದ ನಡೆದ ದಲಿತ ಜಾಗೃತಿ ಕಾರ್ಯಾಗಾರದಲ್ಲಿ ನಿವೃತ್ತ ನ್ಯಾಯಾಧೀಶರಾದ ಎಚ್‌.ಎನ್‌.ನಾಗಮೋಹನ ದಾಸ್‌ ಮಾತನಾಡಿದರು. ಸಮಾಜ ವಿಜ್ಞಾನಿ ಜಿ.ಎನ್‌.ನಾಗರಾಜ್‌, ಬಿ.ರಾಜಶೇಖರ ಮೂರ್ತಿ, ಎಸ್‌.ಜಿ.ವನಜ, ಚಿಕ್ಕರಾಜು.ಎಸ್‌ ಇದ್ದರು   

ಮಾಗಡಿ: ಸಂವಿಧಾನದಲ್ಲಿ ದೋಷಗಳಿಲ್ಲ. ಬದಲಾಗಿ ಸಂವಿಧಾನ ಅನುಷ್ಠಾನದಲ್ಲಿ ದೋಷಗಳಿವೆ ಎಂದು ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ ದಾಸ್ ಅವರು ಅಭಿಪ್ರಾಯಪಟ್ಟರು.

ದಲಿತ ಹಕ್ಕುಗಳ ಸಮಿತಿ ಭಾನುವಾರ ಏರ್ಪಡಿಸಿದ್ದ ಸ್ವಾವಲಂಬಿ ಬದುಕಿಗಾಗಿ ದಲಿತ ಜಾಗೃತಿ ಜಿಲ್ಲಾಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶ ಎದುರಿಸುತ್ತಿರುವ ಭಯೋತ್ಪಾದನೆ, ಮೂಲಭೂತವಾದ, ಕೋಮುವಾದ ಇತರ ಸಾಂಸ್ಕೃತಿಕ ದಿವಾಳಿತನ ಮತ್ತು ಸಮಸ್ಯೆ ಸವಾಲುಗಳಿಗೆ ಸಂವಿಧಾನ ಕಾರಣವಲ್ಲ. ಅಂಬೇಡ್ಕರ್ ರಚಿಸಿರುವ ಮಹಾನ್ ಗ್ರಂಥ ಸಂವಿಧಾನವನ್ನು ಕಡ್ಡಾಯವಾಗಿ ಎಲ್ಲರೂ ಓದಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಕೃಷಿ, ಕೈಗಾರಿಕೆ, ಶಿಕ್ಷಣ ಬಿಕ್ಕಟ್ಟಿನಲ್ಲಿದೆ. ನೀತಿಯಲ್ಲಿ ಬದಲಾವಣೆ ತಂದರೆ ಎರಡು ವರ್ಷಗಳಲ್ಲಿ ಬದಲಾವಣೆ ಕಾಣಬಹುದು. ಸಂವಿಧಾನ ರಕ್ಷಿಸಿ, ಉಳಿಸಿಕೊಂಡು ಅನುಷ್ಠಾನಗೊಳಿಸಬೇಕು. ಸುಪ್ರೀಂಕೋರ್ಟ್‌ ನೀಡುವ ತೀರ್ಮಾನ ಪ್ರಜಾಪ್ರಭುತ್ವ, ಜಾತ್ಯತೀತ, ಸಾಮಾಜಿಕ ನ್ಯಾಯದಂತಿರಬೇಕು. ನಿತ್ಯ ಜೀವನದಲ್ಲಿ ಸಂವಿಧಾನ ಜಾರಿಗೊಳಿಸಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಸಂವಿಧಾನದ ಶಿಷ್ಠಾಚಾರ ಉಲ್ಲಂಘನೆಯಾಗುತ್ತಿದೆ. ಕೋರ್ಟ್‌ಗಳು ತಮಗೆ ಇಷ್ಟ ಬಂದ ತೀರ್ಮಾನ ನೀಡಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂವಿಧಾನದಲ್ಲಿ ತಿಳಿಸಿರುವಂತೆ ಜನಕಲ್ಯಾಣ ಮಾಡುವ ಬದಲು ಸ್ವೇಚ್ಛಾಚಾರದಲ್ಲಿ ಮುಳಗಿವೆ ಎಂದು ಅವರು ಅವರುಟೀಕಿಸಿದರು.

ಸಂವಿಧಾನ ಜಾರಿಯಾಗಿ 71 ವರ್ಷ ಕಳೆದರೂ ಜನಸಾಮಾನ್ಯರಿಗೆ ಸಂವಿಧಾನ ತಿಳಿದಿಲ್ಲ. ದೇಶವೆಂದರೆ ಭೌಗೋಳಿಕ ನಕ್ಷೆ ಅಲ್ಲ. ಕೇವಲ ಮಣ್ಣಲ್ಲ. ಸೌಹಾರ್ದತೆ, ಭಾವೈಕ್ಯ. ಆಹಾರಕ್ಕಾಗಿ ದ್ವೇಷ ಮಾಡುವುದು ಸರಿಯಲ್ಲ. ಪ್ರಜೆಗಳೆಲ್ಲರೂ ಅವರಿಗಿಷ್ಟವಾದ ಆಹಾರ ಸೇವನೆ, ಭಾಷೆ ಬಳಕೆ, ತಮಗೆ ಇಷ್ಟಬಂದ ಧರ್ಮ, ಆಚಾರ ವಿಚಾರ ಅನುಭವಿಸುವ ಸ್ವತಂತ್ರವಿದೆ. ಬುಡಕಟ್ಟು, ಕೆಳಜಾತಿಗಳಿಗೆಇಂದಿಗೂ ಸವಲತ್ತು ದೊರೆಯುತ್ತಿಲ್ಲ. ಪ್ರಜಾಪ್ರಭುತ್ವ ರಕ್ಷಿಸಿ ಉಳಿಸಿಕೊಳ್ಳಲು ಎಲ್ಲರೂ ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕು. ದಲಿತರು ಮೇಲುಸ್ತರಕ್ಕೆ ಹೋಗಲು ಕಾನೂನಿನ ಅರಿವು ಬೆಳೆಸಿಕೊಳ್ಳಬೇಕು ಎಂದು ಅವರುಹೇಳಿದರು.

ಡಿಎಚ್ಎಸ್ ಜಿಲ್ಲಾ ಸಂಚಾಲಕ ಬಿ.ರಾಜಶೇಖರ ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದಲಿತರಿಗೆ ನಿವೇಶನ ಮತ್ತು ಸ್ಮಶಾನ ನೀಡಿಲ್ಲ. ಜಾಗೃತರಾಗಿ ಹೋರಾಟ ಮಾಡಬೇಕಿದೆ ಎಂದರು.ಸಮಾಜ ವಿಜ್ಞಾನಿ ಜಿ.ಎನ್.ನಾಗರಾಜು, ಜಿಲ್ಲಾ ಮುಖಂಡರಾದ ಚಿಕ್ಕರಾಜು.ಎಸ್, ಎಸ್‌.ಜಿ.ವನಜ, ಹೊನ್ನಸ್ವಾಮಯ್ಯ, ತಾಲ್ಲೂಕು ಮುಖಂಡರಾದ ಕೆ.ರಂಗಸ್ವಾಮಿ, ಡಿ.ಎಚ್.ಎಸ್ ಮಹಾದೇವ್.ಎನ್, ಏಳಿಗೆಹಳ್ಳಿ ತಮ್ಮಣ್ಣಗೌಡ ಹಾಗೂ ಪ್ರಗತಿಪರ ಚಿಂತಕರು, ಡಿಎಚ್ಎಸ್ ಕಾರ್ಯಕರ್ತರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.