
ದೇವನಹಳ್ಳಿ: 2027ರ ವೇಳೆಗೆ ಎತ್ತಿನ ಹೊಳೆ ನೀರನ್ನು ಜಿಲ್ಲೆಗೆ ತರುವ ಗುರಿ ಹೊಂದಲಾಗಿದ್ದು, ಈ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹುಭಾಗ ನೀರಾವರಿ ಸೌಲಭ್ಯ ಹೊಂದಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ಪಟ್ಟಣದ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು.
ಎತ್ತಿನಹೊಳೆ ನೀರನ್ನು ಜಿಲ್ಲೆಗೆ ತರುವ ಮೂಲಕ ಈ ಭಾಗದ ರೈತರ ಬಹು ದಿನಗಳ ಕನಸು ಸಾಕಾರಗೊಳಿಸಲಾಗುತ್ತಿದೆ. ಪ್ರಸ್ತಕ ಸಾಲಿನ ಬಜೆಟ್‌ನಲ್ಲಿ ಈಗಾಗಲೇ ದೇವನಹಳ್ಳಿಗೆ ಮೆಟ್ರೊ ರೈಲು ಘೋಷಣೆಯಾಗಿದೆ ಎಂದು ಹೇಳಿದರು.
ಜಿಲ್ಲಾಡಳಿತ ಭವನದ ಸಮೀಪದ ಆದಿನಾರಾಯಣ ಹೊಸಹಳ್ಳಿಯಲ್ಲಿ 20 ಎಕರೆ ಜಾಗದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗುವುದು. ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು ₹5 ಕೋಟಿ ವೆಚ್ಚದಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡ್ರಮ್ ನಿರ್ಮಿಸಲಾಗುವುದು. ಪಟ್ಟಣದ ಜೂನಿಯರ್ ಕಾಲೇಜು ಕ್ರೀಡಾಂಗಣವನ್ನು ₹13.42 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಮಂಜೂರಾತಿ ನೀಡಿದ್ದು, ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯನ್ನು ಪೋಡಿಮುಕ್ತವಾಗಿಸಲು ಸಂಕಲ್ಪ ಮಾಡಿದ್ದು, ಜಿಲ್ಲೆಗೆ 2,471 ಸರ್ವೇ ನಂಬರ್‌ಗಳು ಸರ್ಕಾರಿ ಜಮೀನಿನಲ್ಲಿ ಮಂಜೂರಾಗಿದ್ದು, ಈ ಸರ್ವೇ ನಂಬರ್‌ನಲ್ಲಿ ಮಂಜೂರಾದ ವಾರಸುದಾರರಿಗೆ ದರಖಾಸ್ತು ಪೋಡಿ ಮಾಡಲು ಸರ್ಕಾರ ಅಭಿವೃದ್ಧಿಪಡಿಸಿದ ತಂತ್ರಾಂಶದಲ್ಲಿ 2,047 ಸರ್ವೇ ನಂಬರ್ ಮಂಜೂರಾತಿ ವಿವರ ಭರ್ತಿ ಮಾಡಿದ್ದಾರೆ ಎಂದು ತಿಳಿಸಿದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ₹50 ಕೋಟಿ ವಿಶೇಷ ಅನುದಾನವನ್ನು ಮುಖ್ಯಮಂತ್ರಿ ನೀಡಿದ್ದಾರೆ. ಆದ್ಯತೆ ಮೇರೆಗೆ ತುರ್ತು ಕೆಲಸ ಆರಂಭಿಸಲಾಗುವುದು. ಕಂದಾಯ ಇಲಾಖೆಯಡಿ ಫವತಿ ಖಾತಾ ಬದಲಾವಣೆಗೆ ಆಂದೋಲನ ಆರಂಭಿಸಿದ್ದು, ಜಿಲ್ಲೆಯ 4 ತಾಲ್ಲೂಕಿನಲ್ಲಿ ಜುಲೈ ಅಂತ್ಯಕ್ಕೆ 2,187 ಖಾತೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿ ಕಾರ್ಯಕ್ರಮವನ್ನು ಪ್ರದರ್ಶನ ಮಾಡಿದರು. ಪೊಲೀಸ್ ಸೇರಿದಂತೆ ವಿದ್ಯಾರ್ಥಿಗಳು ಪಥ ಸಂಚಲನ ಮಾಡಿ ತ್ರಿವರ್ಣ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಎ.ಬಿ. ಬಸವರಾಜ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್.ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬ, ತಹಶೀಲ್ದಾರ್ ಅನಿಲ್, ತಾ.ಪಂ ಇಒ ಶ್ರೀನಾಥ್ ಗೌಡ, ಪುರಸಭೆ ಅಧ್ಯಕ್ಷ ಡಿ.ಎಂ. ಮುನಿಕೃಷ್ಣ, ಉಪಾಧ್ಯಕ್ಷ ಜಿ.ಎ.ರವೀಂದ್ರ ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿನ 1777 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ರದ್ದು ಪಡಿಸಿ ರೈತ ಹೋರಾಟಕ್ಕೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿದೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದೆಕೆ.ಎಚ್. ಮುನಿಯಪ್ಪ ಸಚಿವ
ಗೊಬ್ಬರಗುಂಟೆ ಬಳಿ ಕೆಂಪೇಗೌಡ ವಸ್ತು ಸಂಗ್ರಹಾಲಯ
ದೇವನಹಳ್ಳಿ ಪಟ್ಟಣದ ಹೊರವಲಯವಾಗಿರುವ ಆವತಿ ಗೊಬ್ಬರಗುಂಟೆ ಗ್ರಾಮದ ಬಳಿ ಕೆಂಪೇಗೌಡರ ವಸ್ತು ಸಂಗ್ರಹಾಲಯದ ಸ್ಥಳ ನಿಗದಿಗೊಳಿಸಿದ್ದು ಸುಮಾರು 9.5 ಎಕರೆ ಪ್ರದೇಶದಲ್ಲಿ ಸಂಗ್ರಹಾಲಯ ನಿರ್ಮಾಣವಾಗಲಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಶೀಘ್ರದಲ್ಲೇ ₹ 10 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಸ್ಮಾರಕ ನಿರ್ಮಾಣವಾಗಲಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು. ಗ್ನೆಚರ್ ಬಿಸಿನೆಸ್ ಪಾರ್ಕ್ ದೇವನಹಳ್ಳಿಯಲ್ಲಿ 407 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಬೆಂಗಳೂರು ಸಿಗ್ನೆಚರ್ ಬಿಸಿನೆಸ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇದಕ್ಕೆ ಸಂಪರ್ಕ ಕಲ್ಪಿಸಲು ಮೇಲ್ಸೇತುವೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದ ಪಾಲಿನ ಅನುದಾನದಲ್ಲಿ ₹50 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಕೆ.ಎಚ್. ಮುನಿಯಪ್ಪ ತಿಳಿಸಿದರು.
ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿ
ದೇವನಹಳ್ಳಿ ಪಟ್ಟಣದಲ್ಲಿ ₹38 ಕೋಟಿ ವಿಜಯಪುರ ಪಟ್ಟಣದಲ್ಲಿ ₹28 ಕೋಟಿ ವೆಚ್ಚದಲ್ಲಿ ಇಂಧನ ಇಲಾಖೆಯಿಂದ ಯುಜಿ ಕೇಬಲ್ ಅಳವಡಿಸಲು ಮಂಜೂರಾತಿ ಕಾಮಗಾರಿ ಪ್ರಗತಿಯಲ್ಲಿದೆ. ದೇವನಹಳ್ಳಿ ಪಟ್ಟಣದ ಶ್ರೀನಿಧಿ ಜಂಕ್ಷನ್‌ನಿಂದ ರಾಣಿ ಕ್ರಾಸ್‌ವರೆಗೂ ₹25 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ಡಬಲ್ ಚತುಷ್ಪಥ ನಿರ್ಮಾಣ ಕಾಮಗಾರಿ ಪುಗತಿಯಲ್ಲಿದೆ. ನಂದಿ ಕ್ರಾಸ್‌ನಿಂದ ವಿಜಯಪುರದವರೆಗೆ ₹ 50 ಕೋಟಿ ವೆಚ್ಚದಲ್ಲಿ ಡಾಂಬರ್ ಮತ್ತು ಸಿಮೆಂಟ್ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು. ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ₹ 40 ಕೋಟಿ ವಿಶೇಷ ಅನುದಾನದಲ್ಲಿ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ ಸಮುದಾಯ ಭವನಗಳು ಮತ್ತು ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳಲಾಗಿದ್ದು ಸಾಕಷ್ಟು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.