ADVERTISEMENT

ಮನೆ ತೆರವು ಕೈಬಿಟ್ಟ ಕಂದಾಯ ಇಲಾಖೆ

ಬಿದಲಪುರದ ಹದ್ದಿನಹಳ್ಳ: ದಾಖಲೆ ಪರಿಶಿಲಿಸಿ ಕ್ರಮ– ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 6:13 IST
Last Updated 13 ಸೆಪ್ಟೆಂಬರ್ 2022, 6:13 IST
ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದಲಪುರ ಗ್ರಾಮದಲ್ಲಿ ಕಂದಾಯ ಇಲಾಖೆಯ ಹದ್ದಿನಹಳ್ಳದಲ್ಲಿ ನಿರ್ಮಾಣ ಮಾಡಿರುವ ಮನೆಗಳನ್ನು ತೆರವುಗೊಳಿಸಲು ಬಂದಿದ್ದ ಅಧಿಕಾರಿಗಳು ಎರಡೂ ಕಡೆಯವರೊಂದಿಗೆ ಸಮಾಲೋಚನೆ ನಡೆಸಿದರು
ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದಲಪುರ ಗ್ರಾಮದಲ್ಲಿ ಕಂದಾಯ ಇಲಾಖೆಯ ಹದ್ದಿನಹಳ್ಳದಲ್ಲಿ ನಿರ್ಮಾಣ ಮಾಡಿರುವ ಮನೆಗಳನ್ನು ತೆರವುಗೊಳಿಸಲು ಬಂದಿದ್ದ ಅಧಿಕಾರಿಗಳು ಎರಡೂ ಕಡೆಯವರೊಂದಿಗೆ ಸಮಾಲೋಚನೆ ನಡೆಸಿದರು   

ವಿಜಯಪುರ(ಬೆಂ.ಗ್ರಾಮಾಂತರ): ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದಲಪುರ ಗ್ರಾಮದ ಹದ್ದಿನಹಳ್ಳ ಸರ್ಕಾರಿ ಜಾಗದಲ್ಲಿರುವ ಮನೆಗಳನ್ನು ತೆರವುಗೊಳಿಸಲು ಸೋಮವಾರ ತೆರಳಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಪರಿಶಿಷ್ಟ ಕುಟುಂಬದವರು ನಿರ್ಮಾಣ ಮಾಡಿಕೊಂಡಿರುವ ಮನೆಗಳ ಜಾಗವು ನೀರಿನ ಹಳ್ಳವಾಗಿದ್ದು ಮನೆಗಳನ್ನು ತೆರವುಗೊಳಿಸುವಂತೆತಹಶೀಲ್ದಾರ್, ಕಂದಾಯ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಕಂದಾಯ ಅಧಿಕಾರಿಗಳು, ಪೊಲೀಸರು ಮತ್ತು ಯಂತ್ರಗಳೊಂದಿಗೆ ಗ್ರಾಮಕ್ಕೆ ಬಂದಿದ್ದರು.

‘ಇಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ನೀಡಲಾಗಿದೆ. ಪಂಚಾಯಿತಿಯಲ್ಲಿ ಖಾತೆ ಮಾಡಿಸಿಕೊಂಡು, ಅನುದಾನ ಪಡೆದು ಮನೆ ಕಟ್ಟಿಕೊಂಡಿದ್ದೇವೆ. ಇದು ರಾಜಕಾಲುವೆಯೂ ಅಲ್ಲ, ನೀರಿನ ಹಳ್ಳವೂ ಅಲ್ಲ. ಇದೇ ಸರ್ವೆ ನಂ.30ರಲ್ಲಿ ಹೆಚ್ಚು ಮನೆಗಳಿವೆ. ಉದ್ದೇಶ ಪೂರ್ವಕವಾಗಿ ನಮ್ಮ ಮನೆಗಳನ್ನು ತೆರವುಗೊಳಿಸಲು ಹುನ್ನಾರ ನಡೆಸಲಾಗಿದೆ. ಆದ್ದರಿಂದ ತೆರವುಗೊಳಿಸುವ ಆದೇಶ ಮರುಪರಿಶೀಲಿಸಬೇಕೆಂದು‘ನಿವಾಸಿಗಳು ಮನವಿ ಮಾಡಿದರು.

ADVERTISEMENT

ಸ್ಥಳೀಯ ನಿವಾಸಿಗಳಾದ ಜಯಂತ್ ಹಾಗೂ ಗೌರಮ್ಮ ಅವರು ತಹಶೀಲ್ದಾರರಿಗೆ ದಾಖಲೆ ಸಲ್ಲಿಸಿದರು.

‘ನೀರಿನ ಝರಿ ಎಂದು ಭೂಮಾಪಕರು ವರದಿಕೊಟ್ಟಿದ್ದರಿಂದ ಮನೆಗಳು ತೆರವುಗೊಳಿಸುವಂತೆ ಆದೇಶ ಮಾಡಲಾಗಿತ್ತು. ಪುನಃ ಅದನ್ನು ಪರಿಶೀಲನೆ ನಡೆಸಿದಾಗ ಹದ್ದಿನಹಳ್ಳ, ಹದ್ದಿಗಿಡದ ಖರಾಬ್ ಎಂಬ ಬೇರೆ ರೀತಿಯ ವರದಿ ಬಂದಿದೆ. ಪಂಚಾಯಿತಿಯಲ್ಲೂ ಖಾತೆ ಇದೆ ಎಂದು ತಿಳಿಸಿದ್ದಾರೆ. ಎರಡೂ ಕಡೆಯವರನ್ನೂ ಕರೆಯಿಸಿಕೊಂಡು ಸಭೆ ಮಾಡಲಾಗಿದೆ. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ಮಾಡಿದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ತಹಶೀಲ್ದಾರ್ ಶಿವರಾಜ್ ಹೇಳಿದರು.

‘ಹದ್ದಿನಹಳ್ಳ ಒತ್ತುವರಿಯಾಗಿದೆ. ಇಲ್ಲಿ ಮನೆಗಳು ನಿರ್ಮಾಣ ಮಾಡಿರುವುದರಿಂದ ಊರೊಳಗೆ ನೀರು ನುಗ್ಗುತ್ತಿವೆ. ಆದ್ದರಿಂದ ಹದ್ದಿನಹಳ್ಳವನ್ನು ಉಳಿಸಬೇಕು ಎಂದು ಒಂದು ವರ್ಷದ ಹಿಂದೆ ದೂರು ಕೊಟ್ಟಿದ್ದೆ. ಅದನ್ನು ಪರಿಶೀಲನೆ ಮಾಡಿದಾಗ ಹಕ್ಕುಪತ್ರಗಳ ವಿತರಣೆಯಾಗಿರುವ ಬಗ್ಗೆ ದಾಖಲೆಗಳು ಸಿಕ್ಕಿಲ್ಲ. ತಹಶೀಲ್ದಾರರು ಮನೆಗಳು ತೆರವುಗೊಳಿಸುವಂತೆ ಆದೇಶ ಮಾಡಿದ್ದರು. ಆದರೂ ಅಧಿಕಾರಿಗಳು ಸ್ಥಳಕ್ಕೆ ಬಂದು ದಾಖಲೆಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ ಎಂದು ಕಾರಣ ನೀಡಿ ವಾಪಸ್ಸು ಹೋಗಿದ್ದಾರೆ. ನಾನು ಹೋರಾಟ ಮಾಡ್ತೇನೆ‘ ಎಂದು ದೂರುದಾರ ಶಿವಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.