ADVERTISEMENT

ದೇವನಹಳ್ಳಿ | ಅಂಗನವಾಡಿ ಫಲಾನುಭವಿಗಳಿಗೆ ಮುಖ ಚಹರೆ ಗುರುತು: ನೆಟ್‌ವರ್ಕ್ ಸಮಸ್ಯೆ

ಕೆಲಸದೊತ್ತಡ ನಡುವೆ ಅಂಗನವಾಡಿ ಸಿಬ್ಬಂದಿಗೆ ಹೊಸ ತಲೆನೋವು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 1:57 IST
Last Updated 9 ಸೆಪ್ಟೆಂಬರ್ 2025, 1:57 IST
ದೇವನಹಳ್ಳಿ ಪಟ್ಟಣದ ಚಲಪತಿ ಬೀದಿಯಲ್ಲಿರುವ ಅಂಗನವಾಡಿ ಕೇಂದ್ರ
ದೇವನಹಳ್ಳಿ ಪಟ್ಟಣದ ಚಲಪತಿ ಬೀದಿಯಲ್ಲಿರುವ ಅಂಗನವಾಡಿ ಕೇಂದ್ರ   

ದೇವನಹಳ್ಳಿ: ಅಂಗನವಾಡಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಮುಖ ಚಹರ ಗುರುತಿಸುವ ವ್ಯವಸ್ಥೆ ಜಾರಿಗೆ ತಂದಿದ್ದು, ಸಿಬ್ಬಂದಿಗೆ ಇನ್ನಷ್ಟು ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಫಲಾನುಭವಿಗೆ ಯಾವುದೇ ಸೌಲಭ್ಯ ತಲುಪಿಸಬೇಕಿದ್ದರೂ ಮುಖ ಚಹರೆ ಗುರುತು ಬೇಕೇ ಬೇಕು. ಸಾಕಷ್ಟು ಸಂದರ್ಭದಲ್ಲಿ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದ್ದು, ಕೆಲಸದ ಹೊರೆಯೂ ಹೆಚ್ಚಾಗುತ್ತಿದೆ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ 4 ತಾಲ್ಲೂಕುಗಳ ಅಂಗನವಾಡಿ ಕೇಂದ್ರಗಳಲ್ಲಿ ಶೇ 97 ಭಾಗದಷ್ಟು ಎಲ್ಲಾ ಫಲಾನುಭವಿಗಳ ಮುಖ ಚಹರೆಯನ್ನು ಸ್ಕ್ಯಾನ್‌ ಮಾಡುವ ಕಾರ್ಯ ಯಶಸ್ವಿಯಾಗಿದೆ. ಇನ್ನೂ ಶೇ.3 ಭಾಗದಷ್ಟು ಫಲಾನುಭವಿಗಳ ಮುಖ ಚಹರೆಯನ್ನು ತಂತ್ರಾಂಶಕ್ಕೆ ಸ್ಕ್ಯಾನ್‌ ಮಾಡಲು ತೊಂದರೆಯಾಗಿದೆ.

ಫಲಾನುಭವಿಗಳ ಮೊಬೈಲ್ ಸಂಖ್ಯೆ ಆಧಾರ್‌ಗೆ ಲಿಂಕ್ ಆಗದೇ ಇರುವುದು, ಸಮರ್ಪಕ ಆಧಾರ್ ಕಾರ್ಡ್ ನಂಬರ್ ಇಲ್ಲದೇ ಇರುವುದು, ಮೊಬೈಲ್‌ಗೆ ಒಟಿಪಿ ತಡವಾಗಿ ಬರುವುದು ಸೇರಿದಂತೆ ಇನ್ನಷ್ಟು ಸಮಸ್ಯೆ ಕಾಡುತ್ತಿದೆ.

ADVERTISEMENT

ನಂಬರ್ ಲಿಂಕ್ ಆಗಿರಲ್ಲ: ಬಿಹಾರ, ರಾಜಸ್ಥಾನ ಹೀಗೆ ಹೊರ ರಾಜ್ಯದಿಂದ ಬಂದು ಸ್ಥಳೀಯವಾಗಿ ನೆಲೆಸಿರುವ ಸಾಕಷ್ಟು ಫಲಾನುಭವಿಗಳ ಆಧಾರ್‌ಗೆ ಮೊಲೈಲ್‌ ನಂಬರ್‌ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಕಾರ್ಯನಿರ್ವಹಿಸುತ್ತಿಲ್ಲ. ಇನ್ನು ಕೆಲವು ನಂಬರ್‌ಗಳಿಗೆ ಲಿಂಕ್‌ ಆಗಿದ್ದರೂ ಓಟಿಪಿ ಬರುತ್ತಿಲ್ಲ. ಇದರಿಂದ ಎಸ್‌ಎಸ್‌ಎಲ್‌ ತಂತ್ರಾಂಶದಲ್ಲಿ ದತ್ತಾಂಶವನ್ನು ಕ್ರೋಢಿಕರಿಸಲು ಸಾಧ್ಯತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತರು ತಿಳಿಸಿದ್ದಾರೆ.

ಸರ್ಕಾರದ ವಿವಿಧ ಯೋಜನೆಗಳು ಅನರ್ಹರ ಪಾಲಾಗುವುದನ್ನು ತಪ್ಪಿಸಲು ಹಾಲು ಆಧಾರ್‌ ಆಧಾರಿತ ತಂತ್ರಾಂಶದ ಮೂಲಕ ಸೌಲಭ್ಯ ನೀಡಲಾಗುತ್ತಿದೆ. ಇದರ ಉದ್ದೇಶವೂ ಒಳ್ಳೆಯದೇ ಆಗಿದ್ದರೂ, ತಾಂತ್ರಿಕ ಸಮಸ್ಯೆಯಿಂದಾಗಿ ಅರ್ಹರಾಗಿರುವವರಿಗೂ ವಿವಿಧ ಯೋಜನೆಯ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಸರ್ಕಾರ ಅಂಗನವಾಡಿ ಕಾರ್ಯಕರ್ತರಿಗೆ ನೀಡಿರುವ ಪೋಷಕ ಟ್ರ್ಯಾಕ್‌ ಆ್ಯಪ್‌ ಕಾರ್ಯನಿರ್ವಹಿಸುವುದಿಲ್ಲ. ಕೆಲವೊಮ್ಮೆ ಮೊಬೈಲ್‌ನಲ್ಲಿರುವ ಇಂಟರ್‌ನೆಟ್‌ ಸಾಕಾಗದೇ ತಾಂತ್ರಿಕ ಕೆಲಸವೂ ಸ್ಥಗಿತವಾಗುತ್ತಿದೆ. ತಮ್ಮದಲ್ಲದ ತಪ್ಪಿಗೆ ಅಂಗನವಾಡಿ ನೌಕರರು ಸಾರ್ವಜನಿಕರು ಮತ್ತು ಅಧಿಕಾರಿಗಳಿಂದ ನಿಂದನೆ ಎದುರಿಸುತ್ತಿದ್ದಾರೆ.

ಅಂಗನವಾಡಿಗಳಲ್ಲಿ ಸರ್ಕಾರವು ಮುಖ ಚಹರೆ ಮಾಡುವ ಕೆಲಸ ನೀಡಿದೆ. ಮೊಬೈಲ್ ನಂಬರ್‌ಗೆ ಆಧಾರ್ ಲಿಂಕ್ ಆಗದೇ ಸಮಸ್ಯೆ ಆಗುತ್ತಿದೆ. ಇನ್ನೂ ಕೆಲವರು ಹಳೆ ಫೋಟೋ ಆಧಾರ್ ಕಾರ್ಡಿಗೆ ನೀಡಿರುತ್ತಾರೆ. ಆ ಫೋಟೋ ಚಿತ್ರೀಕರಿಸಲು ಆಗಲ್ಲ
ಪುಷ್ಪಾವತಮ್ಮ ತಾಲ್ಲೂಕು ಅಧ್ಯಕ್ಷೆ ಅಂಗನವಾಡಿ ನೌಕರರ ಸಂಘ

ಮತ್ತಷ್ಟು ಹೆಚ್ಚಿದ ಒತ್ತಡ 

ಮುಖ್ಯವಾಗಿ ಜಾರಿಗೊಳಿಸಿರುವ ಮುಖಚಹರೆ ಗುರುತಿಸುವಿಕೆ ವ್ಯವಸ್ಥೆ ಕೈಬಿಟ್ಟರೆ ಅನುಕೂಲ. ಸರ್ಕಾರ ಜಾರಿಗೊಳಿಸಿರುವ ಡಿಜಿಟಲೀಕರಣದಿಂದ ಅಂಗನವಾಡಿ ನೌಕರರ ಕೆಲಸದ ಹೊರೆ ಕಡಿಮೆ ಮಾಡಲಾಗುತ್ತದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ವಾಸ್ತವದಲ್ಲಿ ಮುಳುವಾಗಿ ಪರಿಣಮಿಸಿದೆ ನಳಿನಾಕ್ಷಿ ಜಿಲ್ಲಾಧ್ಯಕ್ಷೆ ಅಂಗನವಾಡಿ ನೌಕರರ ಸಂಘ ಅಗತ್ಯ ಕ್ರಮ ಜಿಲ್ಲೆಯಲ್ಲಿನ ಅಂಗನವಾಡಿಗಳಲ್ಲಿ ಸರ್ಕಾರದ ಮುಖ ಚಹರೆ ಗುರುತಿಸುವಿಕೆ ವ್ಯವಸ್ಥೆ ಶೇ 97ರಷ್ಟು ಸರಿಯಾಗಿದೆ. ಉಳಿಕೆ ಫಲಾನುಭವಿಗಳಿಗೂ ಸೌಲಭ್ಯ ನೀಡಿ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ. ಫಲಾನುಭವಿಗಳ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಿಸಲು ಕ್ರಮವಹಿಸಲಾಗುತ್ತದೆ  ರಮೇಶ್ ಯೋಜನಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.