ADVERTISEMENT

ಎತ್ತಿನಹೊಳೆ ಯೋಜನೆಯಿಂದ ಅನುಕೂಲ

ಜಿಲ್ಲೆಯಲ್ಲಿ 22 ಕೆರೆಗಳಲ್ಲಿ ಹೂಳು ಎತ್ತುವ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 12:54 IST
Last Updated 16 ಜನವರಿ 2019, 12:54 IST
ಹೂಳು ಎತ್ತುವ ಕಾಮಗಾರಿಗೆ ಸಚಿವ ಕೃಷ್ಣ ಭೈರೇಗೌಡ ಚಾಲನೆ ನೀಡಿದರು
ಹೂಳು ಎತ್ತುವ ಕಾಮಗಾರಿಗೆ ಸಚಿವ ಕೃಷ್ಣ ಭೈರೇಗೌಡ ಚಾಲನೆ ನೀಡಿದರು   

ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯ 22 ಕೆರೆಗಳಲ್ಲಿ ಹೂಳು ಎತ್ತುವ ಕಾಮಗಾರಿ ಆರಂಭಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಇಲ್ಲಿನ ದ್ಯಾವರಹಳ್ಳಿ ಕೆರೆಯಂಗಳದಲ್ಲಿ ಹೂಳು ಎತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಲಮಂಗಲ ತಾಲ್ಲೂಕಿನಲ್ಲಿ ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಶೇ2ರಷ್ಟು ಅನುದಾನದಲ್ಲಿ ನಾಲ್ಕು ಕೆರೆಯಲ್ಲಿನ ಹೂಳು ಎತ್ತುವ ಕಾಮಗಾರಿ ನಡೆಯುತ್ತಿದೆ. ದೇವನಹಳ್ಳಿ ತಾಲ್ಲೂಕಿನ ಬ್ಯಾಡರಹಳ್ಳಿ ಕೆರೆಗೆ ಸ್ಥಳೀಯರಾದ ಚೇತನ್‌ಗೌಡ ಹಾಗೂ ದ್ಯಾವರಹಳ್ಳಿ ಕೆರೆಗೆ ಶಾಂತಕುಮಾರ್ ಎಂಬ ದಾನಿಗಳು ಹೂಳು ಎತ್ತುವ ಕಾಮಗಾರಿಗೆ ಮುಂದೆ ಬಂದಿದ್ದಾರೆ ಎಂದರು.

ADVERTISEMENT

ಕನ್ನಮಂಗಲ, ದೇವನಹಳ್ಳಿ ಚಿಕ್ಕಸಿಹಿ ನೀರಿನಕೆರೆ, ಕಾರಹಳ್ಳಿ, ಕೆಂಪಲಿಂಗನಪುರ, ಉಗನವಾಡಿ ಮತ್ತು ಹೊಸಕೋಟೆ, ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಜಿಲ್ಲಾಧಿಕಾರಿ ಕರೀಗೌಡ ಶ್ರಮ ಎಂದು ಶ್ಲಾಘಿಸಿದರು.

ಜಿಲ್ಲೆಯಲ್ಲಿ ನೂರಾರು ಕೆರೆಗಳಿವೆ. ಸ್ಥಳೀಯರ ಆಸಕ್ತಿ ಜತೆಗೆ ಖಾಸಗಿ ಕಂಪನಿಗಳು ಹೆಚ್ಚು ಒತ್ತು ನೀಡಬೇಕು. ಇದಕ್ಕೆ ಸರ್ಕಾರದ ಅನುದಾನವಿಲ್ಲ. ನೀರಾವರಿ ಯೋಜನೆಯಡಿ ಬಳಕೆ ಮಾಡಿಕೊಳ್ಳುವ ಅವಕಾಶ ಇದೆ ಎಂದರು.

ಸಂಸದ ವೀರಪ್ಪ ಮೊಯಿಲಿ ಮಾತನಾಡಿ, ಕೆರೆಯಲ್ಲಿನ ಹೂಳು ತೆಗೆಯುವುದರಿಂದ ಎತ್ತಿನಹೊಳೆ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕರೀಗೌಡ ಮಾತನಾಡಿ, ಯಾವುದೇ ಖಾಸಗಿ ಕಂಪನಿ ಹೂಳು ಎತ್ತಲು ಅನುಮತಿ ಪಡೆಯಬೇಕಾದರೆ ಕನಿಷ್ಠ 80 ಎಕರೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಕೆರೆಗಳಿಗೆ ಅನುಮತಿ ನೀಡಲಾಗುವುದು. ಸಣ್ಣಪುಟ್ಟ ಕೆರೆಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದರು.

ಕಾಮಗಾರಿ ಪ್ರಾಯೋಜಕ ಶಾಂತಕುಮಾರ್ ಮಾತನಾಡಿ, ದ್ಯಾವರಹಳ್ಳಿ ಸ್ವಗ್ರಾಮ. ಸ.ನಂ.30 ರಲ್ಲಿ 8.03 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಹೂಳು ಎತ್ತಲು ಅಂದಾಜು ₹50ಲಕ್ಷ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಪ್ಪ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಕೆ.ಪಿ.ಸಿ.ಸಿ ಸದಸ್ಯ ಚಿನ್ನಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮಿನಾರಾಯಣಪ್ಪ, ಕೆ.ಸಿ.ಮಂಜುನಾಥ್, ರಾಧಮ್ಮ ಮುನಿರಾಜು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಘಟಕ ಅಧ್ಯಕ್ಷ ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮುನಿರಾಜು, ಕೆ.ಪಿ.ಸಿ.ಸಿ ಹಿಂದುಳಿದ ವರ್ಗ ಜಿಲ್ಲಾ ಘಟಕ ಅಧ್ಯಕ್ಷ ಅಪ್ಪಣ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಆರ್.ರವಿಕುಮಾರ್, ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಶ್ರೀನಿವಾಸಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶೈಲ ಜಗದೀಶ್, ವಿಶ್ವನಾಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಮೂರ್ತಿ, ಕೊಯಿರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಕೆ.ವಿ.ಸ್ವಾಮಿ, ಎನ್.ಟಿ.ನಾಗೇಶ್, ಶ್ರೀರಾಮಯ್ಯ, ರಮೇಶ್, ತಹಶೀಲ್ದಾರ್ ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.