ADVERTISEMENT

‘ಶಿಕ್ಷಕರ ಸಮಸ್ಯೆ ಪರಿಹಾರ; ಬದ್ಧತೆ ಬೇಕು’

ದೇವನಹಳ್ಳಿ: ಶಿಕ್ಷಕರ ಸಂಘಟನೆಗಳಿಂದ ಪುಟ್ಟಣ್ಣ ಅವರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 9:03 IST
Last Updated 5 ಸೆಪ್ಟೆಂಬರ್ 2020, 9:03 IST
ಶಿಕ್ಷಕರ ವಿವಿಧ ಸಂಘಟನೆಗಳಿಂದ ಪುಟ್ಟಣ್ಣ ಅವರನ್ನು ಅಭಿನಂದಿಸಲಾಯಿತು
ಶಿಕ್ಷಕರ ವಿವಿಧ ಸಂಘಟನೆಗಳಿಂದ ಪುಟ್ಟಣ್ಣ ಅವರನ್ನು ಅಭಿನಂದಿಸಲಾಯಿತು   

ದೇವನಹಳ್ಳಿ: ‘ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಜನ ಪ್ರತಿನಿಧಿಗಳಲ್ಲಿ ಬದ್ಧತೆ ಇರಬೇಕು’ ಎಂದು ಬಿಜೆಪಿ ಮುಖಂಡ ಪುಟ್ಟಣ್ಣ ಹೇಳಿದರು.

ಇಲ್ಲಿನ ಗಂಗಾ ಪರಮೇಶ‍್ವರಿ ಸಮುದಾಯ ಭವನದಲ್ಲಿ ಶಿಕ್ಷಕರನ್ನು ಕೋವಿಡ್ ವಾರಿಯರ್ಸ್‌ಗಳಾಗಿ ನೇಮಕಗೊಂಡಿದ್ದನ್ನು ರದ್ದುಗೊಳಿಸಿದ ಪ್ರಯುಕ್ತ ಜಿಲ್ಲಾಮಟ್ಟದ ವಿವಿಧ ಶಿಕ್ಷಕರ ಸಂಘಟನೆಗಳಿಂದ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೂರು ಬಾರಿ ಶಿಕ್ಷಕರ ಬೆಂಬಲದಿಂದ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಸತತ 22 ವರ್ಷಗಳ ರಾಜಕೀಯ ಜೀವನದಲ್ಲಿ ಸ್ವಜನ ಪಕ್ಷಪಾತ, ಭ್ರಷ್ಠಚಾರಕ್ಕೆ ಅವಕಾಶವಿಲ್ಲದೆ ಜಾತಿ ಧರ್ಮದ ಬೇಧ ಭಾವವಿಲ್ಲದೆ ಶಿಕ್ಷಕರ ಸಂಕಷ್ಟಗಳಿಗೆ ವಿಧಾನಸೌಧದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಿದ್ದೇನೆ. ನಿಸ್ವಾರ್ಥ ಸೇವೆಯೇ ಈ ಮಟ್ಟದವರೆಗೆ ಬೆಳೆಸಿದೆ’ ಎಂದು ಹೇಳಿದರು.

ADVERTISEMENT

‘ಸರ್ಕಾರಿ, ಅನುದಾನಿತ, ಅನುದಾನರಹಿತ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ಮತ್ತು ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ದೈಹಿಕ ಶಿಕ್ಷಣ ಶಿಕ್ಷಕರ ವೃಂದ ನೇಮಕಾತಿ ಮತ್ತು ಪ್ರೊ.ಎಲ್.ಆರ್ ವೈದ್ಯನಾಥನ್ ವರದಿ ಯಥಾವತ್‌ ಜಾರಿಗೆ ಶ್ರಮಿಸುತ್ತಿದ್ದೇನೆ. ದೈಹಿಕ ಶಿಕ್ಷಣ ಶಿಕ್ಷಕರು, ಸಂಗೀತ ಮತ್ತು ಚಿತ್ರಕಲಾ ಶಿಕ್ಷಕರನ್ನು ಪ್ರೌಢಶಾಲೆಯಲ್ಲಿ ಸಹಶಿಕ್ಷಕರನ್ನಾಗಿ ಪರಿಗಣಿಸಲು ಮತ್ತು ಬಡ್ತಿ ನೀಡುವುದಕ್ಕೆ ಶ್ರಮಿಸಿದ್ದೇನೆ. ವಸತಿ ಶಾಲೆಗಳಲ್ಲಿ ಗೌರವಧನ ಪಡೆಯುತ್ತಿದ್ದ ಶಿಕ್ಷಕರನ್ನು ಕಾಯಂಗೊಳಿಸಿದ್ದೇನೆ’ ಎಂದು ಹೇಳಿದರು.

‘ಶಿಕ್ಷಕರ ಪ್ರತಿಯೊಂದು ಸಮಸ್ಯೆಗೆ ಬಿಜೆಪಿ ಸರ್ಕಾರ ಸ್ಪಂದಿಸುತ್ತಿದೆ. 4ನೇ ಬಾರಿಗೆ ಬರಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ. ನಿಮ್ಮ ಅಭಿಮಾನ ಆಡಳಿತ ಪಕ್ಷದ ಅಭ್ಯರ್ಥಿಯಾದ ನನಗೆ ತೋರಿಸಬೇಕು’ ಎಂದು ಹೇಳಿದರು.

‘ಸರ್ಕಾರ ಶಿಕ್ಷಕರಿಗೆ ಬಡ್ತಿ ನೀಡಿದ ನಂತರ ತಕ್ಕಂತೆ ವೇತನ ಹೆಚ್ಚಳ ಮಾಡಬೇಕು. ಅದೇ ವೇತನವೆಂದರೆ ಬಡ್ತಿಗೆ ಅರ್ಥವಿಲ್ಲ. ಸರ್ಕಾರದ
ಮೇಲೆ ವಿಶ್ವಾಸವಿಡಬೇಕು’ ಎಂದು ಹೇಳಿದರು.

ಬಡ್ತಿ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯಲ್ಲಪ್ಪಗೌಡ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ಗ್ರೇಡ್ 1) ರಾಜ್ಯ ಘಟಕ ಅಧ್ಯಕ್ಷ ಲಕ್ಷ್ಮಿಪತಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಮಾತನಾಡಿದರು.

ತಾಲ್ಲೂಕು ದೈಹಿಕ ಶಿಕ್ಷಣ ಸಂಘ ಅಧ್ಯಕ್ಷ ವೈ.ವಿ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಜಿ.ಶ್ರೀನಿವಾಸ್, ಖಜಾಂಚಿ ವೆಂಕಟೇಶ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷಮುನಿಯಪ್ಪ, ಖಜಾಂಚಿ ಆಂಜಿನಪ್ಪ, ಉಪಾಧ‍್ಯಕ್ಷ ಗಂಗಾಧರ್ ಸಂಘಟನಾ ಕಾರ್ಯದರ್ಶಿ ಬಸವರಾಜ್ ಉಪ್ಪಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಉಪಾಧ್ಯಕ್ಷ ವೆಂಕಟಾಚಲ, ತಾಲ್ಲೂಕು ಘಟಕ ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ಸೋಮಶೇಖರ್, ರಾಷ್ಟ್ರೀಯ ಅಥ್ಲೀಟ್‌ ತರಬೇತುದಾರ ಎಲ್.ಎಸ್. ಚಂದ್ರಪ್ಪ, ರವಿಕುಮಾರ್ ನಾಯ್ಕ, ಪ್ರೇಮಸಿಂಗ್ ರಾಥೋಡ್, ಜಯನಾಯ್ಕ, ವೇಣುಗೊಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.