ADVERTISEMENT

ಶಾಸಕರ ವಿರುದ್ಧ ಅವಹೇಳನ: ಮಸಿ ಬಳಿವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 14:32 IST
Last Updated 30 ಅಕ್ಟೋಬರ್ 2024, 14:32 IST
ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ, ಜೆಡಿಎಸ್‌ ಮುಖಂಡರು ಇದ್ದರು
ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ, ಜೆಡಿಎಸ್‌ ಮುಖಂಡರು ಇದ್ದರು   

ದೊಡ್ಡಬಳ್ಳಾಪುರ: ‘ದೊಡ್ಡತುಮಕೂರು ಗ್ರಾಮದಲ್ಲಿ ಅ.26 ರಂದು ನಡೆದ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸದೇ ಅನಗತ್ಯ ಗೊಂದಲ ಉಂಟುಮಾಡಿ ಮತ ಎಣಿಕೆ ಕಾರ್ಯ ನಿಲ್ಲಿಸಲಾಗಿದೆ. ಶಾಸಕ ಧೀರಜ್‌ ಮುನಿರಾಜು ಅವರ ತೇಜೋವಧೆ ಮಾಡಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವ ಜೆಡಿಎಸ್‌ ಮುಖಂಡ ಹರೀಶ್‌ಗೌಡ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಕಪ್ಪು ಮಸಿ ಬಳಿಯಲಾಗುವುದು’ ಎಂದು ದೊಡ್ಡತುಮಕೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್‌ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಚುನಾವಣೆ ನಡೆಯದೆ ಅವಿರೋಧವಾಗಿ ಆಯ್ಕೆಯಾಗಬೇಕಿತ್ತು. ಆದರೆ ಕಾಂಗ್ರೆಸ್‌ ಮುಖಂಡ ಚುಂಚೇಗೌಡ, ಜೆಡಿಎಸ್‌ ಮುಖಂಡ ಹರೀಶ್‌ಗೌಡ ಅವರಿಂದ ಚುನಾವಣೆ ನಡೆಯುವ ಹಂತಕ್ಕೆ ಹೋಗಿ, ನಮ್ಮಲ್ಲಿಯೇ ಒಡೆದು ಆಳುತ್ತಿದ್ದಾರೆ. 4 ಸ್ಥಾನಕ್ಕೆ ಹೊಂದಾಣಿಕೆ ಮಾಡಿಕೊಂಡು ತಟಸ್ಥವಾಗಿರುವುದು ನಮ್ಮ ನಿಲುವು ಇತ್ತು. ಆದರೆ ಕೊನೆಯಲ್ಲಿ ಚುನಾವಣಾ ಪ್ರಕ್ರಿಯೆ ಶುರು ಮಾಡಿದ್ದೇ ಕಾಂಗ್ರೆಸ್‌ ಪಕ್ಷದವರು. ಚುಂಚೇಗೌಡರಿಗೆ ಸಹಕಾರ ಸಂಘಗಳನ್ನು ತಮಗೆ ಯಾವ ರೀತಿ ಬೇಕೋ ಆ ರೀತಿ ನಡೆಸಿಕೊಂಡು ಹೋಗುವುದು ಅವರಿಗೆ ರಕ್ತಗತವಾಗಿ ಬಂದಿದೆ’ ಎಂದು ದೂರಿದರು.

‘ಶಾಸಕರು ಚುನಾವಣೆ ಸಂಬಂಧಪಟ್ಟಂತೆ ಪ್ರತಿಭಟನೆ ನಡೆಸಿ ನ್ಯಾಯ ಕೇಳಿದ್ದಾರೆ. ಈ ಬಗ್ಗೆ ಚುಂಚೇಗೌಡರು ಹಾಗೂ ಹರೀಶ್‌ಗೌಡರು ಶಾಸಕರ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.

ADVERTISEMENT

ಜೆಡಿಎಸ್‌ ಮುಖಂಡ ವಸಂತ್‌ ಮಾತನಾಡಿ, ‘ತಾಲ್ಲೂಕಿನ ಜೆಡಿಎಸ್‌ ಮುಖಂಡ ಹರೀಶ್‌ಗೌಡ ಮೈತ್ರಿ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಟರಿಗೆ ದೂರು ನೀಡಲಾಗುವುದು’ ಎಂದರು.

ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಮಂಜುನಾಥ್‌, ದೊಡ್ಡತುಮಕೂರು ಗ್ರಾಮ ಪಂಚಾಯಿತಿ ಸದಸ್ಯ ಚೆನ್ನೇಗೌಡ, ಪ್ರಕಾಶ್, ಮಂಜುನಾಥ್, ನಾಗರಾಜು, ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.