ADVERTISEMENT

ಚನ್ನರಾಯಪಟ್ಟಣ: ಶಾಂತಿಯುತ ಪಾದಯಾತ್ರೆಗೆ ನಿರ್ಧಾರ

ರೈತರ ಮನವೊಲಿಸಲು ಪೊಲೀಸರ ಯತ್ನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:08 IST
Last Updated 26 ಜನವರಿ 2023, 5:08 IST
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ಧರಣಿ ಸ್ಥಳಕ್ಕೆ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ರೈತರೊಂದಿಗೆ‌ ಸಭೆ ನಡೆಸಿತು
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ಧರಣಿ ಸ್ಥಳಕ್ಕೆ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ರೈತರೊಂದಿಗೆ‌ ಸಭೆ ನಡೆಸಿತು   

ಚನ್ನರಾಯಪಟ್ಟಣ (ದೇವನಹಳ್ಳಿ): ಬುಧವಾರ ಇಲ್ಲಿನ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ ಪೊಲೀಸ್‌ ಅಧಿಕಾರಿಗಳ ತಂಡ ರೈತರು ಮೌನ ನಡಿಗೆ ಮಾಡಬಾರದು ಎಂದು ಮನವಿ ಮಾಡಿತು.

ಗಣರಾಜ್ಯೋತ್ಸವ ರಾಷ್ಟ್ರೀಯ ಸಂಭ್ರಮಾಚರಣೆಯಾಗಿದೆ. ಪ್ರತಿಭಟನೆ, ಮೆರವಣಿಗೆ ಮಾಡುವುದು ಶೋಭೆ ತರುವುದಿಲ್ಲ. ಆದ್ದರಿಂದ ರೈತರು ಶಾಂತಿಯುತವಾಗಿ ಇರಬೇಕು ಎಂದು ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಈಗಾಗಲೇ ಆ. 15ರಂದು ರೈತರು ಮಾಡಿದ‌ ಮೆರವಣಿಗೆಯಿಂದ ಸರ್ಕಾರದ ಮುಂದೆ ಸಾಕಷ್ಟು ಅಧಿಕಾರಿಗಳು ತಲೆತಗ್ಗಿಸುವಂತಹ ಪ್ರಸಂಗ ಉಂಟಾಗಿದೆ ಎಂದು ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ರೈತರಿಗೆ‌ ಮನವರಿಕೆ
ಮಾಡಿದರು.

ADVERTISEMENT

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲವು ರೈತರು ಶಾಂತಿಯುತ ಪಾದಯಾತ್ರೆಗೆ ತಡೆ ನೀಡುತ್ತಿರುವುದು ರೈತರ ಹೋರಾಟ ಹತ್ತಿಕ್ಕುವ ತಂತ್ರವಾಗಿದೆ. ದೇವನಹಳ್ಳಿ ಪಟ್ಟಣ ಬೆಂಗಳೂರು ಪೊಲೀಸ್ ಕಮಿಷನರೇಟ್‌ಗೆ ಒಳಪಡುವುದರಿಂದ ಈಗಾಗಲೇ 9 ರೈತ ಮುಖಂಡರ‌ ಮೇಲೆ‌ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಗ್ರಾಮಾಂತರ ಎಸ್.ಪಿ ವ್ಯಾಪ್ತಿ ಪ್ರದೇಶದ ಗಡಿಯವರೆಗೂ ಶಾಂತಿಯುತ ಮೌನ ಮೆರವಣಿಗೆ ಮಾಡಿಯೇ ತಿರುತ್ತೇವೆ ಎಂದು ಪಟ್ಟುಹಿಡಿದರು. ಚನ್ನರಾಯಪಟ್ಟಣ ಪೊಲೀಸರಿಂದ ಮೆರವಣಿಗೆ ಮಾಡದಂತೆ ಸೂಚನಾ ಪತ್ರ ವಿತರಣೆ ಮಾಡಲಾಯಿತು.

ರೈತರನ್ನು ಸಮಾಧಾನ ಮಾಡಲು ಯತ್ನಿಸಿದ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಉಸ್ತುವಾರಿ ಸಚಿವರು ಹಾಗೂ ಕೈಗಾರಿಕಾ ಸಚಿವರಿಗೆ ನಿಮ್ಮ ಮನವಿ ತಲುಪಿಸಲಾಗುವುದು. ಜಿಲ್ಲಾಧಿಕಾರಿಯೊಂದಿಗೆ ನಿಮ್ಮನ್ನು ಭೇಟಿ ಮಾಡಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಡಿವೈಎಸ್‌ಪಿ ನಾಗರಾಜ್, ಸರ್ಕಲ್ ಇನ್‌ಸ್ಪೆಕ್ಟರ್ ವೀರೇಂದ್ರ, ಚನ್ನರಾಯಪಟ್ಟಣ ಸಬ್ ಇನ್‌ಸ್ಪೆಕ್ಟರ್ ಶರಣಪ್ಪ ಸೇರಿದಂತೆ ರೈತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.