ADVERTISEMENT

ಸಮಾಜ ಕಟ್ಟುವಲ್ಲಿ ಸ್ತ್ರೀ ಪಾತ್ರ ಹಿರಿದು

ವಿಜಯಪುರ: ಬಿಕೆಎಸ್‌ ಪ್ರತಿಷ್ಠಾನದ ಮಹಿಳಾ ಘಟಕದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 8:08 IST
Last Updated 18 ಫೆಬ್ರುವರಿ 2021, 8:08 IST
ವಿಜಯಪುರದಲ್ಲಿ ಬಿಕೆಎಸ್ ಪ್ರತಿಷ್ಠಾನದ ಮಹಿಳಾ ಘಟಕವನ್ನು ಸಂಸ್ಥಾಪಕ ಬಿ.ಕೆ. ಶಿವಪ್ಪ ಉದ್ಘಾಟಿಸಿದರು
ವಿಜಯಪುರದಲ್ಲಿ ಬಿಕೆಎಸ್ ಪ್ರತಿಷ್ಠಾನದ ಮಹಿಳಾ ಘಟಕವನ್ನು ಸಂಸ್ಥಾಪಕ ಬಿ.ಕೆ. ಶಿವಪ್ಪ ಉದ್ಘಾಟಿಸಿದರು   

ವಿಜಯಪುರ: ಬಲಿಷ್ಠ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾದದ್ದು. ಮಹಿಳೆ ತನ್ನ ಕುಟುಂಬದಲ್ಲಿ ತಾಯಿ, ಮಗಳು, ಸೊಸೆ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಾಳೆ ಎಂದು ಬಿಕೆಎಸ್ ಪ್ರತಿಷ್ಠಾನದ ಸಂಸ್ಥಾಪಕ ಬಿ.ಕೆ. ಶಿವಪ್ಪ ಹೇಳಿದರು.

ಪಟ್ಟಣದ 14ನೇ ವಾರ್ಡ್‌ನಲ್ಲಿ ಬುಧವಾರ ಆಯೋಜಿಸಿದ್ದ ಮಹಿಳಾ ಘಟಕದ ಉದ್ಘಾಟನೆ, ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರಿಗೆ ಸಾಮಾಜಿಕ ವ್ಯವಹಾರದ ಮೂಲಕ ಅರ್ಥಿಕ ಭದ್ರತೆ ಒದಗಿಸಿರುವ ಕಾರಣ ಸಮಾಜದ ಅಭಿವೃದ್ಧಿಯ ಶಿಲ್ಪಿಗಳಾಗಿ ಮುಂದುವರಿಯುತ್ತಿದ್ದಾರೆ. ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಸರಿ ಸಮಾನರು. ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾರೆ ಎನ್ನುವ ಭಾವನೆ ಧರ್ಮ ಗ್ರಂಥಗಳಲ್ಲಿದೆ ಎಂದರು.

ADVERTISEMENT

ಪ್ರತಿ ಮಗುವಿಗೆ ಮನೆಯೇ ಮೊದಲ ಪಾಠಶಾಲೆ. ಹಾಗೆಯೇ ತಾಯಿಯೇ ಮೊದಲ ಗುರು. ಮಹಿಳೆಯು ಒಂದು ಸಮುದಾಯ ಹಾಗೂ ದೇಶದ ಅಭಿವೃದ್ಧಿಗೆ ಕಾರಣಕರ್ತಳಾಗುತ್ತಾಳೆ. ಅವರಿಗೆ ಸಿಗಬೇಕಾದ ಸ್ಥಾನಮಾನ, ಗೌರವ ಕೊಡುವುದು ಎಲ್ಲರ ಕರ್ತವ್ಯ. ಪ್ರತಿ ಮಹಿಳೆಯು ಸಾಮಾಜಿಕ ವ್ಯವಹಾರಗಳ ಮೂಲಕ ಆರ್ಥಿಕ ಭದ್ರತೆ ಕಂಡುಕೊಳ್ಳುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.

ಮುಖಂಡ ಮುರಳಿ ಮಾತನಾಡಿ, ಮಹಿಳೆಯರು ಶೈಕ್ಷಣಿಕ, ಕ್ರೀಡೆ, ರಾಜಕೀಯ, ವಾಣಿಜ್ಯ, ಜ್ಞಾನ, ಕೃಷಿ ಮತ್ತಿತರ ಕ್ಷೇತ್ರದಲ್ಲಿ ಮುಂದಿದ್ದಾರೆ. ಹೆಣ್ಣುಮಕ್ಕಳಿಗೆ ಕೊಡುವ ಶಿಕ್ಷಣದಿಂದ ಕುಟುಂಬ ಉತ್ತಮ ಸ್ಥಿತಿಯಲ್ಲಿರುತ್ತದೆ ಎಂದರು.

ಪ್ರತಿಯೊಬ್ಬರೂ ಮಹಿಳೆಯರ ಮನಸ್ಥಿತಿ ಅರಿತುಕೊಳ್ಳಬೇಕು. ಸತಿ ಸಹಗಮನದಂತಹ ಆಚರಣೆಗಳು ತೊಲಗಿದ್ದರೂ ಬಾಲ್ಯವಿವಾಹ, ವರದಕ್ಷಿಣೆ, ಹೆಣ್ಣುಭ್ರೂಣ ಹತ್ಯೆಯಂತಹ ಪಿಡುಗುಗಳು ಕಂಡುಬರುತ್ತಿವೆ. ವರದಕ್ಷಿಣೆ ಪಡೆಯುವುದಾಗಲಿ, ಕೊಡುವುದಾಗಲಿ ಮಾಡಬಾರದು. ಆಸ್ತಿಯಲ್ಲಿ ಸಹ ಮಹಿಳೆಯರಿಗೆ ಸಮಾನ ಹಕ್ಕಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ ಎಂದು ಹೇಳಿದರು.

ಸಮಾಜ ಸೇವಕ ಪ್ರಕಾಶ್ ಮಾತನಾಡಿ, ದೇಶದಲ್ಲಿ ಪ್ರತಿ 100 ಮಹಿಳೆಯರಲ್ಲಿ ಒಬ್ಬರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆದರೆ, ಯಾರೂ ಅದನ್ನು ಬಹಿರಂಗಪಡಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಂಘಟನೆಗಳ ನೆರವು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.

ಪ್ರತಿ ಮಹಿಳೆಯು ಸಹಭಾಗಿತ್ವದಲ್ಲಿ ಬದುಕುವಂತೆ ಆಗಬೇಕು. ಮಹಿಳೆಯು ಸಾಮಾಜಿಕ ಕಟ್ಟುಪಾಡುಗಳನ್ನು ತೊರೆದು ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

14ನೇ ವಾರ್ಡಿನ ಮಹಿಳಾ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.