ADVERTISEMENT

ಸಾಲು ಸಾಲು ಹಬ್ಬ; ಕೋಳಿ ಮಾಂಸ ದುಬಾರಿ

₹170ರಿಂದ ₹240 ಏರಿಕೆ । ನಾಟಿ ಕೋಳಿಗೆ ಬೇಡಿಕೆ

ಎನ್.ಡಿ.ವೆಂಕಟೇಶ್‌
Published 9 ಏಪ್ರಿಲ್ 2024, 5:38 IST
Last Updated 9 ಏಪ್ರಿಲ್ 2024, 5:38 IST
ನಾಟಿ ಕೋಳಿ ಪಾರಂನಲ್ಲಿ ಬೆಳೆಯುತ್ತಿರುವ ನಾಟಿ ಕೋಳಿಗಳು(ಸಂಗ್ರಹ ಚಿತ್ರ)
ನಾಟಿ ಕೋಳಿ ಪಾರಂನಲ್ಲಿ ಬೆಳೆಯುತ್ತಿರುವ ನಾಟಿ ಕೋಳಿಗಳು(ಸಂಗ್ರಹ ಚಿತ್ರ)   

ಹೊಸಕೋಟೆ: ಮುನಿ ದ್ಯಾವರ, ಜಾತ್ರೆ, ಯುಗಾದಿಯ ಹೊಸ ತೊಡಕು, ನಂತರ ರಂಜಾನ್ ಹಬ್ಬಗಳು ಸಲುಸಾಲಾಗಿ ಬಂದಿರುವುದರಿಂದ ಕೋಳಿ ಮಾಂಸದ ಬೆಲೆ ದಿಢೀರನೆ ಏರಿಕೆಯಾಗಿದೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಚಿಕ್ಕ ಬಾಯ್ಲರ್ ಕೋಳಿ ಕೆ.ಜಿಗೆ ₹170 ಇದ್ದದ್ದು, ಏಕಾಏಕಿ ₹240 ಆಗಿದೆ. ಅದೇ ರೀತಿಯಲ್ಲಿ ದೊಡ್ಡ ಬಾಯ್ಲರ್ ಕೋಳಿ ₹180ರಿಂದ ₹240ಕ್ಕೆ ಮುಟ್ಟಿದೆ. ಕೆಲವೆಡೆ ಹತ್ತಿಪ್ಪತ್ತು ರೂಪಾಯಿ ವ್ಯತ್ಯಾಸವೂ ಆಗಿದೆ. ಚಿಕ್ಕಬಾಯ್ಲರ್ ಮಾಂಸದ ಬೆಲೆ ₹70 ಹೆಚ್ಚಳವಾಗಿದ್ದರೆ, ದೊಡ್ಡ ಬಾಯ್ಲರ್ ಬೆಲೆ ₹60 ಹೆಚ್ಚಳವಾಗಿದೆ.

ನಾಟಿ ಕೋಳಿಗೆ ಕೆ.ಜಿಗೆ ₹700: ನಾಟಿ ಕೋಳಿಯ ಬೆಲೆ ಗಗನಕ್ಕೆ ಮುಟ್ಟಿದ್ದು, ₹300 ರಿಂದ ₹350 ಇದ್ದ ನಾಟಿ ಕೋಳಿಯ ಬೆಲೆ ಏಕಾಏಕಿ ₹550 ರಿಂದ ₹600 ಗಳಿಗೆ ಏರಿಕೆಯಾಗಿದೆ.

ADVERTISEMENT

ಪಂದ್ಯದ ಹುಂಜದ ಬೆಲೆ ಸರಾಸರಿ ಕೆ.ಜಿಗೆ ₹700 ರಂತೆ ಮಾರಾಟವಾಗುತ್ತಿದೆ. ಸಜೀವ ಕೋಳಿಯ ಬೆಲೆ ₹700, ₹550 ರಿಂದ ₹600ಕ್ಕೆ ಮಾರಾಟ ಆಗುತ್ತಿದೆ.

ಬಾಯ್ಲರ್ ಕೋಳಿ ಮಾಂಸ ಸೇವನೆಯಿಂದ ಹಲವು ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂದು ಜನ ನಾಟಿ ಕೋಳಿಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ಪಾರಂಗಳಲ್ಲಿ ನಾಟಿ ಕೋಳಿಗಳನ್ನು ಬಯಸದ ಜನರು ಹಳ್ಳಿಗಳ ಮನೆಗಳಲ್ಲಿ ಬೆಳೆದಿರುವ ನಾಟಿ ಕೋಳಿಗಳತ್ತ ಬೆನ್ನುಬಿದ್ದಿದ್ದು, ಬೆಲೆಗಳು ಗಗನಕ್ಕೆ ಏರಿಕೆಯಾಗಿವೆ.

ಕುರಿ, ಮೇಕೆ ಮಾಂಸದ ಬೆಲೆಯಲ್ಲಿ ಯಾವುದೆ ವ್ಯತ್ಯಾಸವಿಲ್ಲ. ಪ್ರಸ್ತುತ ಕೆಜಿ ಮಟನ್‌ಗೆ ₹750 ರಿಂದ ₹800 ವರೆಗೆ ಮಾರಾಟವಾಗುತ್ತಿದೆ.

ಬಾಯ್ಲರ್ ಕೋಳಿಗಳ ಪಾರಂ

ಬೇಸಿಗೆ ಹೊಡೆತ: ಕೋಳಿ ಉತ್ಪಾದನೆ ಕುಸಿತ ಆನೇಕಲ್ : ಬೇಸಿಗೆಯಲ್ಲಿ ಕೋಳಿ ಉತ್ಪಾದನೆ ಕುಸಿತ ಆಗಿರುವ ಹಿನ್ನೆಲೆಯಲ್ಲಿ ಕೋಳಿ ಮಾಂಸದ ಬೆಲೆ ಏರಿಕೆಯಾಗಿದೆ. ತಾಲ್ಲೂಕಿನಲ್ಲಿ ಕೆಜಿಗೆ 200-210 ರೂ. ಕೋಳಿ ಮಾಂಸ ದೊರೆಯುತ್ತಿತ್ತು. ಆದರೆ ಕಳೆದ ಕೆಲ ದಿನಗಳಿಂದ ಕೋಳಿ ಮಾಂಸ ₹270-290ಕ್ಕೆ ಏರಿಕೆಯಾಗಿದೆ. ಬಿಸಿಲಿನ ಬೇಗೆಯಿಂದಾಗಿ ಉತ್ಪಾದನೆ ಕುಸಿತ ಹೆಚ್ಚಿದ ಬೇಡಿಕೆಯಿಂದ ಬೆಲೆ ಏರಿಕೆಯಾಗಿದೆ. ಯುಗಾದಿ ಹಬ್ಬಕ್ಕೆ ಮತ್ತಷ್ಟು ಬೆಲೆ ಏರಿಕೆಯಾಗುವ ಸಂಭವವಿದೆ ಎಂದು ಮಾಂಸದ ವ್ಯಾಪಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.