ADVERTISEMENT

ದೇವನಹಳ್ಳಿ: ಕನ್ನಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 6:47 IST
Last Updated 22 ಜೂನ್ 2021, 6:47 IST
ಕನ್ನಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು
ಕನ್ನಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು   

ದೇವನಹಳ್ಳಿ: ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯದ ದಾಖಲೆ ಕೊಠಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಕೆಲ ದಾಖಲೆಗಳು ಸುಟ್ಟು ಹೋಗಿವೆ. ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮರೆ ಮಾಚಲು ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.

ಕೋಟ್ಯಂತರ ರೂಪಾಯಿ ಪಂಚಾಯಿತಿಗೆ ನಷ್ಟ ಉಂಟಾಗಿದೆ. ನಕಲಿ ರಸೀದಿ ಪುಸ್ತಕಗಳನ್ನು ಬಳಕೆ ಮಾಡಿಕೊಂಡು, ಹಣ ದುರುಪಯೋಗ ಮಾಡಲಾಗಿದೆ ಎನ್ನುವ ಆರೋಪದಡಿ ಕಂಪ್ಯೂಟರ್ ಆಪರೇಟರ್ ಅನುರಾಧ ಎಂಬುವವರನ್ನು ಅಮಾನತು ಪಡಿಸಲಾಗಿತ್ತು.

ಈ ಕುರಿತು ತನಿಖೆ ನಡೆಸಲು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಆರ್.ರವಿಕುಮಾರ್ ಅವರು, ತಂಡವನ್ನು ರಚನೆ ಮಾಡಿದ್ದರು. ಈ ಕುರಿತು ತನಿಖೆ ನಡೆಯುತ್ತಿತ್ತು. ಜೂ.20ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ನಾಗೇಶ್ ಅವರು, ಅನುರಾಧ ಪಂಚಾಯಿತಿಯಲ್ಲಿ ಹಣ ದುರುಪಯೋಗ ಮಾಡಿಕೊಂಡು ನಷ್ಟ ಉಂಟುಮಾಡಿದ್ದಾರೆ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ADVERTISEMENT

ಅದೇ ದಿನ ಅನುರಾಧ ಅವರು, ’ಪಂಚಾಯಿತಿ ಅಧ್ಯಕ್ಷ ಕೆ.ಆರ್.ನಾಗೇಶ್ ಹಣ ವಾಪಸ್‌ ನೀಡದೆ ಬೆದರಿಕೆ ಹಾಕಿದ್ದಾರೆ. ಮೊಬೈಲ್ ಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಅಲ್ಲದೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್ ಅವರು ನನ್ನ ಅಮಾನತು ರದ್ದುಪಡಿಸಲು ₹4ಲಕ್ಷ ಹಣ ಪಡೆದಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಕಾಂತ ಅವರು ₹9ಲಕ್ಷ ಹಣ ಪಡೆದು ವಾಪಸು ನೀಡಿಲ್ಲ. ಪಂಚಾಯಿತಿಯಲ್ಲಿ ಎಲ್ಲೆಲ್ಲಿ ಅಕ್ರಮ ನಡೆದಿವೆ ಎಂಬುದು ನನಗೆ ಗೊತ್ತಿದೆ. ಆದ್ದರಿಂದ ನನ್ನನ್ನು ಅಮಾನತ್ತು ಮಾಡಿಸಿದ್ದಾರೆ’ ಎಂದು ಮೂರು ಜನರ ಮೇಲೆ ಅನುರಾಧ ದೂರು ನೀಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಸೋಮವಾರ ರಾತ್ರಿ ಪಂಚಾಯಿತಿಯಲ್ಲಿ ದಾಖಲೆಗಳಿರುವ ಕೊಠಡಿ ಗಾಜು ಹೊಡೆದು ಬೆಂಕಿ ಹಚ್ಚಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಒ ವಸಂತ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.