ADVERTISEMENT

ಫೈರಿಂಗ್ ಪರ್ವ ಆರಂಭ: ಬೆಚ್ಚಿದ ಪುಡಿ ರೌಡಿಗಳು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 11:05 IST
Last Updated 30 ಅಕ್ಟೋಬರ್ 2020, 11:05 IST
ಇತ್ತೀಚೆಗೆ ಅಪಹರಣ ಕಾರರ ಮೇಲೆ ಪೊಲೀಸರು ಪೈರಿಂಗ್ ನಡೆಸಿದ ಸ್ಥಳ ಪರಿಶೀಲನೆ ನಡೆಸುತ್ತಿರುವ ಜಿಲ್ಲಾ ಎಸ್ಪಿ ರವಿ.ಡಿಚನ್ನಣ್ಣನವರ್, ಡಿವೈಎಸ್ಪಿ ಟಿ.ರಂಗಪ್ಪ (ಸಂಗ್ರಹ ಚಿತ್ರ)
ಇತ್ತೀಚೆಗೆ ಅಪಹರಣ ಕಾರರ ಮೇಲೆ ಪೊಲೀಸರು ಪೈರಿಂಗ್ ನಡೆಸಿದ ಸ್ಥಳ ಪರಿಶೀಲನೆ ನಡೆಸುತ್ತಿರುವ ಜಿಲ್ಲಾ ಎಸ್ಪಿ ರವಿ.ಡಿಚನ್ನಣ್ಣನವರ್, ಡಿವೈಎಸ್ಪಿ ಟಿ.ರಂಗಪ್ಪ (ಸಂಗ್ರಹ ಚಿತ್ರ)   

ದೊಡ್ಡಬಳ್ಳಾಪುರ: ತಾಲ್ಲೂಕಿನ ಪೊಲೀಸ್‌ ಇಲಾಖೆ ಇತಿಹಾಸದಲ್ಲಿಯೇ ಒಂದು ವರ್ಷದ ಅವಧಿಯಲ್ಲಿ ವಿವಿಧ ಪ್ರಕರಣಗಳಲ್ಲಿ ನಾಲ್ಕು ಜನರ ಮೇಲೆ ಫೈರಿಂಗ್‌ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ.

ವಿವಿಧ ಕ್ಲಿಷ್ಟಕರ ಪ್ರಕರಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ ಟಿ.ರಂಗಪ್ಪ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಫೈರಿಂಗ್‌ ಪರ್ವ ಆರಂಭವಾಗಿದೆ. ಇಷ್ಟು ವರ್ಷ ಬೆಂಗಳೂರಿಗೆ ಸೀಮಿತವಾಗಿದ್ದ ಪೊಲೀಸ್‌ ಫೈರಿಂಗ್‌ ತಾಲ್ಲೂಕಿಗೂ ಕಾಲಿಟ್ಟಿದೆ.

ಕೊಲೆ ಯತ್ನ ಪ್ರಕರಣದ ಆರೋಪಿ ಪೊಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದವನನ್ನು ಬೆನ್ನುಹತ್ತಿದ್ದ ಗ್ರಾಮಾಂತರ ಪೊಲೀಸ್‌ ಠಾಣೆ ಸಬ್‌ಇನ್‌ ಸ್ಪೆಕ್ಟರ್ ಗಜೇಂದ್ರ ಅವರು ಒಂದು ವರ್ಷದ ಹಿಂದೆ ಆಲಹಳ್ಳಿ ಸಮೀಪ ಫೈರಿಂಗ್‌ ನಡೆಸಿ ಬಂಧಿಸಿದ್ದರು. ಇದಾದ ನಂತರ ಇಲ್ಲಿಯವರೆಗೆ ನಾಲ್ಕು ಜನ ಆರೋಪಿಗಳ ಬಂಧನ ಸಂದರ್ಭದಲ್ಲಿ ಫೈರಿಂಗ್‌ ನಡೆಸುವ ಮೂಲಕ ಬಂಧಿಸಲಾಗಿದೆ.

ADVERTISEMENT

ರಾಜಧಾನಿ ಬೆಂಗಳೂರಿನ ಅಂಚಿನಲ್ಲೇ ಇರುವ ತಾಲ್ಲೂಕುಗಳಲ್ಲೂ ಕೈಗಾರಿಕೆಗಳ ಸ್ಥಾಪನೆ, ಫ್ಲಾಟ್‌ಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳು ವೇಗವಾಗಿ ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಅಪರಾಧ ಜಗತ್ತು ಸಹ ವಿಸ್ತರಣೆಯಾಗುತ್ತಿದೆ. ಆಸ್ತಿ ವಿವಾದಕ್ಕೆ ಅಪಹರಣ, ರೌಡಿಗಳ ಉಪಟಳ, ದರೋಡೆಯಂತಹ ಕೃತ್ಯಗಳು ಬೆಳೆಯತೊಡಗಿವೆ.

ರೌಡಿಗಳ ಕಾರ್ಯಕ್ಷೇತ್ರ ಬೆಂಗಳೂರಿನ ಸುತ್ತಲಿನ ತಾಲ್ಲೂಕುಗಳಿಗೆ ವಿಸ್ತರಣೆಯಾಗುವುದನ್ನು ತಡೆಯಲು ಪೊಲೀಸ್‌ ಸಿಬ್ಬಂದಿ ಸಂಖ್ಯೆ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಾಗಬೇಕಿದೆ. ಬೆಂಗಳೂರಿನಲ್ಲಿನ ಠಾಣೆಗಳಿಗೆ ಹೋಲಿಸಿದರೆ ರಾಜಧಾನಿ ಒಂದು ಭಾಗವೇ ಆಗಿ ಬೆಳೆಯುತ್ತಿರುವ ತಾಲ್ಲೂಕುಗಳಲ್ಲಿ ಪೊಲೀಸ್‌ ಸಿಬ್ಬಂದಿ ಸಂಖ್ಯೆ ಅತ್ಯಂತ ಕಡಿಮೆ ಇದ್ದು ಒತ್ತಡ ಹೆಚ್ಚಾಗಿದೆ ಎನ್ನುತ್ತಾರೆ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ.

ಬೆಚ್ಚಿಬಿದ್ದ ಪುಡಿ ರೌಡಿಗಳು: ಒಂದು ವರ್ಷದಿಂದ ಈಚೆಗೆ ತಾಲ್ಲೂಕಿನ ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಸಂದರ್ಭದಲ್ಲಿ ನಡೆಯುತ್ತಿರುವ ಫೈರಿಂಗ್‌ನಿಂದಾಗಿ ನಗರದಲ್ಲಿ ಕಾರ್ಯಾಚರಣೆಯಲ್ಲಿದ್ದ ಪುಡಿ ರೌಡಿಗಳು, ಸಣ್ಣಪುಟ್ಟ ಕಳವುಗಳಲ್ಲಿ ತೊಡಗಿದ್ದವರು ತಮ್ಮ ಕಾರ್ಯಾಕ್ಷೇತ್ರಗಳನ್ನು ಇತರ ತಾಲ್ಲೂಕುಗಳ ಕಡೆಗೆ ವಿಸ್ತರಿಸಿಕೊಂಡಿದ್ದಾರೆ ಎನ್ನುತ್ತಾರೆ ‍ಪೊಲೀಸರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.