ADVERTISEMENT

ದೊಡ್ಡಬಳ್ಳಾಪುರ: ತಾಲ್ಲೂಕಿಗೆ ಕಾಲಿಟ್ಟ ಮುಂಗಾರಿನ ಮೊದಲ ಮಳೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 13:25 IST
Last Updated 24 ಜೂನ್ 2019, 13:25 IST
ದೊಡ್ಡಬಳ್ಳಾಪುರದಲ್ಲಿ ಸೋಮವಾರ ಸಂಜೆ ಬಿದ್ದ ಮುಂಗಾರಿನ ಮೊದಲ ಮಳೆಗೆ ಛತ್ರಿಗಳನ್ನು ಹಿಡಿದು ಹೆಜ್ಜೆ ಹಾಕಿದ ಯುವತಿಯರು
ದೊಡ್ಡಬಳ್ಳಾಪುರದಲ್ಲಿ ಸೋಮವಾರ ಸಂಜೆ ಬಿದ್ದ ಮುಂಗಾರಿನ ಮೊದಲ ಮಳೆಗೆ ಛತ್ರಿಗಳನ್ನು ಹಿಡಿದು ಹೆಜ್ಜೆ ಹಾಕಿದ ಯುವತಿಯರು   

ದೊಡ್ಡಬಳ್ಳಾಪುರ: ಮೇ ತಿಂಗಳ ಕೊನೆ ವಾರದಲ್ಲಿ ಮೂರ್ನಾಲ್ಕು ದಿನಗಳ ಕಾಲ ಜೋರು ಮಳೆ ಸುರಿದು ಬೆಳೆ, ಅಸ್ತಿ ನಾಶ, ಸಾವು ನೋವುಗಳಿಗೆ ಕಾರಣವಾಗಿದ್ದ ಮುಂಗಾರು ಪೂರ್ವ ಮಳೆ ನಂತರ ಇದೇ ಪ್ರಥಮ ಬಾರಿಗೆ ಈ ಸಾಲಿನ ಮುಂಗಾರು ಮಳೆ ಸೋಮವಾರ ತಾಲ್ಲೂಕಿನಾದ್ಯಂತ ಸುರಿದಿದೆ.

ಸುಮಾರು ಅರ್ಧಗಂಟೆಗೂ ಹೆಚ್ಚಿನ ಸಮಯ ಮಳೆ ಬಿದ್ದಿದ್ದರಿಂದ ಉಳುಮೆ ಮಾಡಲು, ಉಳುಮೆ ಆಗಿರುವ ಹೊಲಗಳಲ್ಲಿ ಬಿತ್ತನೆ ಕೆಲಸ ಪ್ರಾರಂಭಿಸಲು ಭೂಮಿ ಹದವಾಗಿರುವುದು ರೈತರ ಮನದಲ್ಲಿ ಉತ್ತಮ ಬೆಳೆಯ ಭರವಸೆ ಮೂಡಿಸಿದೆ.

ನಗರ ಸೇರಿದಂತೆ ತಾಲ್ಲೂಕಿನ ಮಧುರೆ, ಕಸಬಾ, ದೊಡ್ಡಬೆಳವಂಗಲ ಹಾಗೂ ತೂಬಗೆರೆ ಹೋಬಳಿಯ ಬಹುತೇಕ ಕಡೆಗಳಲ್ಲಿ ಹದವಾಗಿ ಮಳೆಯಾಗಿದೆ. ಸಂಜೆ ಶಾಲಾ, ಕಾಲೇಜುಗಳ ತರಗತಿಗಳು ಬಿಡುವ ಸಮಯದಲ್ಲೇ ಮಳೆ ಬಂದಿದ್ದರಿಂದ ವಿದ್ಯಾರ್ಥಿಗಳು ಬಣ್ಣ ಬಣ್ಣದ ಛತ್ರಿಗಳನ್ನು ಹಿಡಿದು ರಸ್ತೆಗಳಲ್ಲಿ ನಡೆದು ಹೋಗುತ್ತಿದ್ದ ದೃಶ್ಯ ಒಂದು ಕಡೆಯಾದರೆ ಛತ್ರಿಗಳು ಇಲ್ಲದವರು ಮಳೆಯಲ್ಲಿಯೇ ನೆನೆಯುತ್ತಾ ಶಾಲಾ ಬ್ಯಾಗ್‌ಗಳನ್ನೇ ತಲೆ ಮೇಲೆ ಹೊತ್ತು ನಡೆಯುತ್ತಿದ್ದರು.

ADVERTISEMENT

ಈಗಾಗಲೇ ಕೃಷಿ ಇಲಾಖೆ ವತಿಯಿಂದ ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲೂ ರಾಗಿ, ಮುಸುಕಿನ ಜೋಳದ ಬಿತ್ತನೆ ಬೀಜ ಸಂಗ್ರಹಿಸಲಾಗಿದೆ. ಹೋಬಳಿ ಮಟ್ಟದಲ್ಲೂ ಸಮಗ್ರ ಕೃಷಿ ಅಭಿಯಾನ ನಡೆಸುವ ಮೂಲಕ ರೈತರಿಗೆ ವಿವಿಧ ಇಲಾಖೆಗಳಿಂದ ದೊರೆಯವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.